ತಾರಮ್ಮಯ್ಯ, ತಂದು ತೋರಮ್ಮಯ್ಯ!
ದೂರದ ಬಾನೊಳು ಏರಿದ ಚಂದ್ರನ
ತಾರಮ್ಮಯ್ಯ ತಂದು ತೋರಮ್ಮಯ್ಯ!
ಹರಿಯುವ ನೀರಿನ ಪರಿಯ ಬಾನಿನ ಮೇಲೆ
ಇರುಳಲ್ಲಿ ಬೆಳ್ಳಗೆ ಅರಳಿದ ಹೂವನ್ನು, -ತಾರಮ್ಮಯ್ಯ
ತಣ್ಣಗೆ ಮೊಸರಲ್ಲಿ ಬೆಣ್ಣೆ ಮುದ್ದೆಯ ಹಾಗೆ
ಕಣ್ಣಿಗೆ ಕಾಣುವ ಹುಣ್ಣಿಮೆ ಚಂದ್ರನ-ತಾರಮ್ಮಯ್ಯ
ಹೊಳೆಯುವ ಬಾನಿನ ತಳದಲ್ಲಿ ಮೂಡುತ,
ಮುಳುಗುವ ಬೆಳ್ಳಿಯ ಗಳಿಗೆಯ ಬಟ್ಟಲನ್ನು-ತಾರಮ್ಮಯ್ಯ
ರಂಗನಾಥನ ಮನೆ ಅಂಗಳದಲಿ ಇದ್ದು,
ಕಂಗೊಳಿಸುವ ಚೆಲು ತಿಂಗಳ ದೀವಿಗೆ-ತಾರಮ್ಮಯ್ಯ.
*****
(ಕವಿಶಿಷ್ಯ)