ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು
ಇರುಳಿನಲಿ ಭಯವೆರಸಿ ದಾರಿ ಮರೆದಿಹುದು
ಹೊರಗೆ ಚಳಿ ಮಳೆ ಗಾಳಿ ಜಗವ ಭಯಗೊಳಿಸುವುದು
ಸೊರಗಿ ಮೌನದಿ ನಡುಗಿ ಭೀತಿಗೊಳುತಿಹುದು.
ಒಳ ದನಿಯು ಅಡಗಿಹುದು ಎದೆಯೊಳಗೆ ಉಸಿರಿಲ್ಲ
ಕಳೆದೊಗೆದ ಸಿಪ್ಪೆಯೊಲು ಬಾಳಲರಿವಿಲ್ಲ
ಏನಪಾಯವು ಬಹುದೊ ಸೆರೆಯಲ್ಲದಿನ್ನಿಲ್ಲ
ಕಾಣದಿಹ ದಿಕ್ಕುಗಳ ನೋಡುತಿಹುದಲ್ಲ.
ಎಲ್ಲಿಂದ ಬಂದೆನೋ ಇಲ್ಲೆನಿತು ಸಮಯವೋ
ಎಲ್ಲಿಗೆಯ್ವುದೊ ಮುಂದೆ – ಮುಂದಾವ ನೋವೊ?
ಬಲ್ಲವರ ಸುಳಿವಿಲ್ಲ ಬಲ್ಲಿದರ ನೆರೆಯಿಲ್ಲ
ಇಲ್ಲಿ ಪರಮಡಿಲಿನಲಿ ತನಗಿನ್ನು ಸಾವೊ?
ದೀನ ದಿಟ್ಟಿಯು ಮೂಡಿ ಎದ್ದರೇನೋ ಎಂದು
ಮಾನಕೇ ಚ್ಯುತಿಯಾಯ್ತು ಇಲ್ಲಿ ತಾಂ ಬಂದು
ಹೀನತನದಿಂ ತನ್ನ ತಿನ್ನುವರು ಇವರೆಂದು
ಮ್ಲಾನಮುಖದಿಂ ಸೊರಗಿ ಕರಗುತಿದೆ ನೊಂದು.
ಹಳೆಯುಗದ ನೆನಪಿಲ್ಲ ಹೊಸ ಜಗದ ಅರಿವಿಲ್ಲ
ಕಳೆದುಳಿದ ದಿನಮಾನದಳತೆ ಗೊತ್ತಿಲ್ಲ
ಎಲ್ಲರೂ ತನ್ನಂತೆ ಕೊಳೆವ ಜೀವಿಗಳೆಲ್ಲ
ಹೊಲ್ಲದೀ ಬಾಳಿನ್ನು ಮೋಕ್ಷಕ್ಕೆ ಸಲ್ಲ.
ಇರವರಿಯದಿರುತಿಹರು ಅದಕ್ಕಾಗಿ ದುಃಖಿಸರು
ಹೊರಹೊಮ್ಮಿ ಸಾಗುತಿದೆ- ಅದ ಕಾಣರಿವರು
ಸರುವ ಸುಖವಿದು ಎಂಬ ಭ್ರಾಂತಿಯಿಂ ತುಂಬಿಹರು
ಜರೆ ಬಾಯ ತೆರೆದಿಹುದು ಅದ ನೋಡದಿಹರು.
ರೆಕ್ಕೆ ಮುರಿದಿಕ್ಕಿದರು ಕಾಲಲಡಿ ತುಳಿಯುವರು
ಹಕ್ಕನೊರೆಯುವವರಿಂಗೆ ಬುದ್ಧಿ ಹೇಳುವರು
ಅಕ್ಕರೆನರಿಯದರು ಸತ್ಯವನೆ ಕಾಣದರು
ಫಕ್ಕನೇ ಮುನಿಸಾಳ್ದು ಸೊಕ್ಕ ಬೀರುವ.
ಇದ ಕಂಡು ಭಯಗೊಂಡು ಕನಿಕರಿಸಿ ಉದ್ಧರಿಸಿ
ಬದುಕಿಸುವೆನಿವರನ್ನು ಎಂದು ನಿಜವರಸಿ
ಹದುಳ ನುಡಿಯಾಡಿದರೆ ಜಗ್ಗಿದರು ಸಿಂಡರಿಸಿ
ಹದನರಿತು ಬೇಡಿದುದು ಮಂಗಳವ ಹರಸಿ.
ಲೋಕ ಬದುಕಿದೊಡಾನು ಮುಕ್ತನಪ್ಪೆನು ಎಂದು
ಸಾಕಲ್ಯದಿಂ ಬೇಡುತಿರೆ ಬೆಳಕ ಕಂಡು
ಆ ಕಡೆಗೆ ಹಾರಿದುದು ನವಚೇತನವ ತಂದು
ನೂಕಿ ತಮ ಬೆಳಕಿತ್ತು ಸಂತಸದೊಳಂದು.
*****