೧
ಜೀಯಾ
ಹೀಗೆ ನಿನ್ನ ಮುಂದೆ
ಒಳಗಿನದೆಲ್ಲ ಸುರಿದು
ಖಾಲಿಯಾಗಿ ನಿಂತುದು
ಅದೆಷ್ಟನೆಯ ಸಲವೋ
ಲೆಕ್ಕವಿಟ್ಟಿರಬಹುದು ನೀನು.
ಮತ್ತೆ ಮತ್ತೆ ನನ್ನ ತುಂಬುವವನು
ಕರುಣಾಳು ನೀನೇ ತಾನೇ?
ಅಬ್ಬರದ ಶರಧಿಯಲಿ
ಅಲೆವ ಮೀನು ನಾನು
ದಿಕ್ಕು ತಪ್ಪುತ್ತ ಬೆಚ್ಚಿ ಸ್ತಬ್ಧವಾಗುತ್ತ
ಅಲೆಗಳು ಕೊಂಡೊಯ್ದಾಗ ದಡಕ್ಕೆ
ಗುರುತ್ವ ಸೆಳೆದರೆ ಒಳಕ್ಕೆ
ಸಾಕು ಬೇಕುಗಳ ಏತಾಪಾತಾ
ಈಜುವುದೆಂಬುದೂ ಈಗ
ಜಾಡಿಗೆ ಬಿದ್ದ ಉಸಿರು.
ನೀರೆಣ್ಣೆಗೆ ಬೆಂಕಿ ಹೊತ್ತಿ
ಶರಧಿಯ ಬಾಹುಗಳ
ಚಾಚುತ್ತವೆ ಕೆನ್ನಾಲಿಗೆ
ಅತ್ತಲಿಂದ ನುಣುಚಿಕೊಂಡು
ಇತ್ತ ತಿರುಗಿದರೆ
ಉಸಿರು ಕಟ್ಟುವ
ಮತ್ತೆ ಬಿಡುವ ಪ್ರಾಣಾಯಾಮ.
ತುಂಬುವವರ ಸುರಿಯುವವರ
ಯಾರ್‍ಯಾರದೋ ಕೈಚಳಕ!
ಒಳಗಿನ ಹೊರಗಿನ
ಯಾವ್ಯಾವುದೋ ಅಸಂಬದ್ಧ ಲೆಕ್ಕ.
೨
ಮೊರೆವ ಕಡಲಿನಾಳದಲೆಲ್ಲೋ
ತಣ್ಣಗೆ ಹರಿವ ನದಿಯಿದೆಯಂತೆ
ಅಲ್ಲಿ ಸಿಹಿ ನೀರಿನ
ನುಣುಪು ಮರಳಿನೆದೆ
ಮೇಲೆ ನೀರು
ಸದ್ದಿಲ್ಲದೇ ಮಲಗುತ್ತದಂತೆ
ಒಂದಕ್ಕೆ ಇನ್ನೊಂದು
ಮೌನದಲಿ ಲಾಲಿ
ಹಾಡುತ್ತವಂತೆ
ಕಾಣದಂತೆ ಎತ್ತಲೋ ಸಾಗುತ್ತವಂತೆ
ಹೊರಗೆಂಬುದಿಲ್ಲ
ಒಳಗೆಂಬುದಿಲ್ಲ.
ತೋರು ನನಗೆ ಜೀಯಾ
ಆ ಕಡಲಿನಾಳದ
ನದಿಯ ತೋರು ನನಗೆ.
*****