ನಾನು ಚಿತ್ರಿಕನಲ್ಲ
ಆದರೂ ಬಾಳಿನೊಂದು ಹಾಳೆಯಲಿ
ಚಿತ್ತಾರ ಬರೆಯ ಬಯಸಿದೆ.
ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ
ಕುಸುರಿ ಕೆಲಸದ ಚತುರತೆಯಿಲ್
ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ.
ಆದರೂ ಆಸೆ –
ಬಾಳ ಕೊನೆಯ ಸಂಪುಟದ ಒಂದು ಹಾಳೆಯಲಿ
ಜೀವನ ಚಿತ್ತಾರ ಬರೆಯುವಾಸೆ.
ಯಾವ ಚಿತ್ತಾರ ಬರೆಯಲಿ?
ಪ್ರೀತಿ, ಪ್ರೇಮ, ಪ್ರಣಯ?
ಇಲ್ಲ, ಎಲ್ಲರೂ ಬರೆಯುತ್ತಾರೆ ಅದನ್ನು?!
ಆದರೆ ಯಾರಿಗೂ ಅರ್ಥವಾಗದ
ಬಣ್ಣ ಬಣ್ಣದ ಗೋಜಲದು.
ಸಾವು, ನೋವು, ಆಗಲಿಕೆ, ದುಃಖ?
ಇಲ್ಲ. ಇದು ಎಲ್ಲರ ಬಾಳಲ್ಲೂ
ಬರೆಯಲಾಗುವ ಕರಿಬಣ್ಣದ ಚಿತ್ರಗಳು
ಅದರಲ್ಲೇನಿದೆ ವಿಶೇಷ?
ಸತ್ಯ, ನ್ಯಾಯ, ನೀತಿ, ಧರ್ಮ?
ಇಲ್ಲ. ಇದಕ್ಕೆಲ್ಲ ಈಗ ಅರ್ಥವೇ ಇಲ್ಲ.
ಕ್ರೌರ್ಯ, ಕೊಲೆ, ಸುಲಿಗೆ, ಅತ್ಯಾಚಾರ?
ಇಲ್ಲ. ಈಗ ಎಲ್ಲೆಲ್ಲೂ ಅದೇ ಚಿತ್ರ.
ಮತ್ತಾವ ಚಿತ್ತಾರ ಬರೆಯಲಿ?
ಭವಿಷ್ಯದ ಚಿತ್ರ ಅದಾಗಬೇಕು
ಜೀವನ ಪ್ರೀತಿ ಅಲ್ಲಿರಬೇಕು
ರೇಖೆಗಳ ಸಿಕ್ಕುಗಳಿಲ್ಲದ, ಬಣ್ಣಗಳ ಗೊಂದಲಗಳಿರದ
ನನ್ನ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು
ನೋಡಿ ಅರ್ಥಮಾಡಿಕೊಳ್ಳಲಾಗುವ
ಯಾರಕಾಲಕ್ಕೂ ಮುಂದುವರಿಸಲಾಗುವ
ಚಿತ್ತಾರ ಅದಾಗಬೇಕು.
ವಿಶ್ವ ಪ್ರೇಮದ ಚಿತ್ರ,
ಪರಿಸರಮಾಲಿನ್ಯವಿರದ ಚಿತ್ರ
ತಂಪು ಗಾಳಿಯ ಸ್ಪರ್ಶಕೆ
ಮರಗಿಡಗಳು ತೊನೆದಾಡುವ ಚಿತ್ರ
ಹೂಗಳು ನಲಿದಾಡುವ ಚಿತ್ರ
ಜಾತಿ ಮತ ಭೇದ ಭಾವಗಳಿಲ್ಲದೆ
ಎಲ್ಲರೊಂದಾಗಿ ನಲಿಯುವ ಚಿತ್ರ
ಮಕ್ಕಳ ಮುಖ ತುಂಬ ನಗುಚೆಲ್ಲುವ ಚಿತ್ರ
ಅವರಿಗಿಷ್ಟವಾದ ಗೆರೆ ಎಳೆದು ಬಣ್ಣ ತುಂಬಿದರೂ
ಹಾಳಾಗದ ಚಿತ್ರ ಅದಾಗಬೇಕು.
ನಾ ಬರೆವ ಚಿತ್ರ ಜೀವಂತಿಕೆಯ ಪುಟಿಸುವ
ಜೀವನದ ಮುಂದುವರಿಕೆಯ ಚಿತ್ರವಾಗಬೇಕು,
ಮನಕ್ಕೆ ತಂಪು ನೀಡುವ ಚಿತ್ತಾರವಾಗಬೇಕು
ಎಂದು ಬಯಸುತ –
ಯಾವ ಮುಖವಾಡಗಳಿಲ್ಲದೆ ನಾನೇ ನಾನಾಗಿ ನಿಂತು
ನನ್ನ ಬಯಕೆಯ ಚಿತ್ತಾರ ಬರೆಯಲು
ರೇಖೆಗಳ ಬಣ್ಣಗಳ ಹುಡುಕತೊಡಗಿದೆ.
ರೇಖೆಗಳು ಬಣ್ಣಗಳು ಕೈಗೆ ಸಿಗಲಿಲ್ಲ;
ಬರೆಯ ಬೇಕೆಂದು ಬಯಸಿ ರೂಪಿಸಿದ ಚಿತ್ರ
ಹಾಳೆಯಲಿ ಮೂಡಿ ಬರಲೇ ಇಲ್ಲ.
ಹಾಳೆ ಖಾಲಿಯಾಗಿಯೇ ಉಳಿಯಿತು!
ಇನ್ನೊಬ್ಬ ಚಿತ್ರಕನ ಕಾಯುತ್ತಾ.
*****