ವ್ಯವಸ್ಥೆಯ ಒಳಗಿನಿಂದ
ಒಂದೊಂದೇ ಪ್ರಶ್ನೆಗಳೇಳುತ್ತವೆ
ರಾಜಕೀಯದ ಬಣ್ಣ ಬಯಲಾಗುತ್ತದೆ
ಶಸ್ತ್ರಾಸ್ತ್ರ ಕೆಳಗಿಟ್ಟ ಅವರು
ಶಾಂತಿ ಮಂತ್ರಗಳ ಜಪಿಸುತ್ತಿದ್ದಾರೆ ನೋಡು!
ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲಿ
ಕೆಂಪು ಬಣ್ಣಕ್ಕೆ ಅನೇಕ ಛಾಯೆಗಳಿವೆ ತಾನೇ?
ಶಾಂತಿ ಒಪ್ಪಂದ ಆಗಿದೆ ಅವರೊಂದಿಗೆ
ಶಸ್ತ್ರಾಸ್ತ್ರ ಕೆಳಗಿಟ್ಟು ಶಾಂತವಾಗಿದ್ದಾರೆ
ಹಗ್ಗದ ಮೇಲಿನ ನಡಿಗೆ ನಡೆಯುತ್ತಿದ್ದಾರೆ ನೋಡು!
ಪೋಲೀಸು ರಾಜ್ಯದಲ್ಲಿ ಸೈನ್ಯದ ಸಮಾವೇಶ
ಸಂಸ್ಕೃತಿಯ ಹೆಸರಿನಲಿ ಸಭೆ ಸಮಾರಂಭಗಳು
ಘೋಷಣೆಗಳು ಮೊಳಗುತ್ತಿವೆ ನೋಡು!
ಧರ್ಮ, ಜನಾಂಗಗಳ ಪ್ರಶ್ನೆ, ಓಟಿನ ಲೆಕ್ಕಾಚಾರ
ರೈತ, ಕಾರ್ಮಿಕರ ಸವಾಲು ನೆಲಕಚ್ಚಿವೆ ನೋಡು!
ಚಿವುಟಿ ಹಾಕಿದ ಕನಸುಗಳ ಸಮಾಧಿ
ಸಮತೆಯ ಮಣ್ಣಲ್ಲಿ ಚಿಗುರೊಡೆದು
ಮತ್ತೆ ಮತ್ತೆ ಪ್ರಶ್ನಿಸುತ್ತಿವೆ ನೋಡು!
ರೈತರ ಆತ್ಮ ಹತ್ಯೆಗಳಿಗೆ ಕೊನೆಯೆಂದು?
ಕಾರ್ಮಿಕರ ತುತ್ತಿಗೆ ಲಾಕೌಟ್ ನಿಲ್ಲುವದೆಂದು?
ದುಡಿಯುವ ಕೈಗಳು ನೇಣಿಗೆ ಶರಣಾಗಿ
ಊರ ಹೊರಗಿನ ಮರಗಳಿಗೆ ಹೆಣಗಳು
ಕೇಳುವವರಿಲ್ಲದೆ ನೇತಾಡುತ್ತಿವೆ ನೋಡು!
ಹೊತ್ತು ನಿಂತಿದ್ದಾಳೆ ಧರಿತ್ರಿ
ಹೆಗಲ ಮೇಲೆ ಹೆಣಭಾರದ ಹೊರೆ ನೋಡು
ಅಸಹಾಯಕ ಮಕ್ಕಳ, ಮುದುಕರ
ಜವಾಬ್ದಾರಿ, ಖಾಲಿ ತುತ್ತಿನ ಚೀಲ ತುಂಬಲು
ಅಗ್ಗದ ಕೂಲಿಯಾಗಿದ್ದಕ್ಕೆ ಯಾರು ಹೊಣೆ ಹೇಳು?
ಸಹನೆ ಮೀರುವ ಹೊತ್ತಲ್ಲೂ ಹೇಳುತ್ತಿದ್ದಾಳೆ
ಬಂದೂಕು ಬೇಡ ಹೋರಾಡಲು ಶಬ್ದಗಳಿವೆಯಲ್ಲ!
*****