ಬೆಳಕಿನ ಸೂರ್ಯ ಉದುರಿಸುತ್ತಾನೆ
ಆವರ್ತ ಬೀಜಗಳು ಸಾಗರದಲಿ.
ತೇಲಿ ಮತ್ತೆ ಹನಿ ಆಗಿ ಆಗಸಕ್ಕೇರಿ
ಬಿಳಿ ಮೋಡಗಳು ತೇಲಿದ ನೀಲಿ ಆಕಾಶ.
ಎಲ್ಲಾ ಗುಟ್ಟುಗಳ ನಿನ್ನಲ್ಲೇ ಇರಿಸಿಕೊಂಡು
ಅವಸ್ಥೆಯಲಿ ಒಲೆಬೆಂಕಿ ಉರಿದು,
ಬೀಜಗಳ ರೊಟ್ಟಿಗಳು ಹರಡಿದ ಬದುಕು.
ಗಾಳಿ ಬೀಸಿ ತೇಲಿದ ಪಟ ನೀಲಿ ಆಕಾಶ,
ತಿರುಗಿ ತಿರುಗಿ ಮೇಲೇರಿ ಕೆಳಗಿಳಿದ
ಚಕ್ರತೊಟ್ಟಿಲು, ಏರಿದವರು ಇಳಿದು
ಇಳಿದವರು ಏರಿ ಆವರ್ತದ ಪರಧಿ.
ನಿಯಮಕ್ಕೆ ಅರಳಿದ ಹೂಗಳ ನೀಲಿ ಆಕಾಶ.
ಹೊರಗಿನ ಬೆಳದಿಂಗಳ ತಂಪು ಎದೆಯೊಳಗೆ
ಇಳಿದು ಹಿತದ ಮೆತ್ತನೆ ಪೀಠದ ಬುದ್ಧ.
ಶಾಶ್ವತ ಭ್ರಮೆಯ ಹೊಡೆದೋಡಿಸಿ ಈ
ಆವರ್ತನೆಯ ಜಾಲ ಬಿಡಿಸಿಕೊಂಡ ಮುಕ್ತ.
ಏರುವುದು ಇಳಿಯುವುದು ಎಲ್ಲಾ
ಗೊಂದಲಗಳ ದಾಟಿ, ನೀ ಅತಿಥಿ.
ನಡೆದ ದಾರಿತುಂಬ ದಿವ್ಯ ಬೆಳಗು ಸೂರ್ಯ
ಅನಾವರ್ತನದ ಚೇತನ ಚಿಂತನ ಬೆಳಗು.
*****