ಮನೆಯ ತುಂಬ ಹಾರಿಕೊಂಡು
ಅಡುಗೆ ಮನೆಗೆ ನುಗ್ಗಿಕೊಂಡು
ಅಂಗಳದಲ್ಲಿ ನಲಿದುಕೊಂಡು
ನಮ್ಮ ನೋಡಿ ಹೆದರಿಕೊಂಡು
ಬುರ್ರೆಂದು ಹಾರಿ ಹೋಗಿ
ಮತ್ತೆ ಮತ್ತೆ ಇಣುಕುತ್ತಿದ್ದ
ಚಿಲಿಪಿಲಿ ಹಾಡಿಕೊಂಡು
ಮಕ್ಕಳಿಗೆ ಕುಶಿ ಕೊಡುತ್ತಿದ್ದ
ಗುಬ್ಬಚ್ಚಿಗಳೆಲ್ಲಿ ಕಾಣೆಯಾದುವು?
ಅಕ್ಕಿ ಬೇಳೆ ಕೇರುವಾಗ
ದೂರ ನಿಂತು ಹೆಕ್ಕುತ್ತಿದ್ದ
ಮನುಷ್ಯರಿಂದ ದೂರವಿದ್ದು
ಮಡಿಧರ್‍ಮ ಪಾಲಿಸುತ್ತಿದ್ದ
ಪುಟ್ಟ ಪುಟ್ಟ ಹೂವಿನಂತಹ
ಗುಬ್ಬಚ್ಚಿಗಳೆಲ್ಲಿ ಮಾಯವಾದವು?
ಪುಟ್ಟ ಗೂಡು ಕಟ್ಟಲೆಂದು
ಕಸಕಡ್ಡಿ ನಾರುಗೀರು ಹೆಕ್ಕಿ ತಂದು
ಅಲ್ಲಿ ಇಲ್ಲಿ ಕದ್ದು ಮುಚ್ಚಿ ಇಟ್ಟುಕೊಂಡು
ಗೂಡ ನೈದು ತೊಲೆಯ ಮೇಲೆ ನೇತು ಬಿಡುವ
ಗುಬ್ಬಚ್ಚಿಗಳೆಲ್ಲಿ ಓಡಿಹೋದವು?
ಮೂರ್ತಿ ಚಿಕ್ಕದು ಬುದ್ದಿ ದೊಡ್ಡದು
ಪ್ಲಾನು ಇಲ್ಲ ಶಿಲ್ಪ ಶಾಸ್ತ್ರವಿಲ್ಲ
ಕಟ್ಟುವ ಗೂಡಿಗೆ ಬಿರುಕು ಇಲ್ಲ.
ಕೊಕ್ಕಿನಿಂದ ಗೂಡ ಹೆಣೆದು
ತುಂಬು ಸಂಸಾರ ಹೂಡುವ ದೊಡ್ಡ ಮನದ
ಗುಬ್ಬಚ್ಚಿಗಳೇಕೆ ಇಲ್ಲವಾದುವು?
ಅಕ್ಕಿ ಕಾಳು ಕೇರದಿರುವ
ಕಿಟಕಿಬಾಗಿಲುಗಳೆಲ್ಲವ ಮುಚ್ಚಿ
ಒಳಗೆ ಕುಳಿತು ಸೊರಗುತ್ತಿರುವ
ಮಾನವತೆಯ ಮರೆಯುತ್ತಿರುವ
ಮನುಜ ಕುಲವ ಕಂಡು ಹೇಸಿ
ನಾಡ ಬಿಟ್ಟು ಹಾರಿ ಹೋದುವೇನು
ಆ ಪುಟ್ಟ ಪುಟ್ಟ ಮುದ್ದು ಹಕ್ಕಿಗಳು?
*****