ಕೇದಾರ ಗೌಳ
ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ?
ಯಾರಿಗೊಪ್ಪಿಸಿ ಕಣ್ಣೆದೆಯ ಬಾ-
ಯಾರಿಕೆಯನಂತರಿಸಲಿ?
೧
ಮನಸು ಮೆಚ್ಚಿದ ಮಲರುಗಳನೇ
ಎನಿತೆನಿತೊ ನಾನಾಯ್ದೆ.
ಮನವನಿದರೊಳೆ ನಿಲಿಸಿ ಬಲು ಚೆಲು-
ವೆನಿಪ ದಂಡೆಯ ಕೋದೆ.
ಇನಿತು ವೇಳೆಯ ಬಣಗುಗಳೆಯುತ
ಹೆಣೆದೆನಲ್ಲವೆ ಹೂವ ಬರಿದೆ?
ಯಾರಿಗರುಪಿಸಲಿದನು ಮಾಲೆಯ-
ನಾರಕೊರಳೊಳಗಿರಿಸಲಿ ?
೨
ನನ್ನ ಮುಡಿಯೊಳೆ ಮುಡಿದರೀ ಸರ-
ವನ್ನು ಚೆನ್ನೆನಿಸೀತೇ?
ಮುನ್ನ ನಾ ಬಗೆದಿರುವ ಸೊಗಸನು
ನನ್ನೆದೆಯು ಸವಿದೀತೇ?
ಕುನ್ನಿತನ ಸರಿ ನನ್ನದಿದು! ಆ
ಚೆನ್ನತೆಯನೆಂತಿನ್ನು ಕಾಣುವೆ?
ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ?
೩
ಅರಳ ದಂಡೆಯೆ ನಿನ್ನ ಚೆಲುವಿನ
ಸಿರಿಗೆ ಸರಿಯಿಹುದೇನೆ ?
ಮರುಳು ನಿನ್ನೀ ಚೆಲುವ ಬಳಸುವ
ಸರಿದೆರನ ನೀ ಕಾಣೆ
ಅರಿಯೆನಾ ಪರಿಯನ್ನು ನಾನೂ
ಕುರುಡ-ಕುರುಡರ ಕೆಳೆಯಿದೇನೆ ?
ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ ?
೪
ಜನಿಸಿ ಬಂದುದಕರಳುಗಳೆ ನೀ-
ವಿನಿತನೂ ಫಲ ಕಾಣದೆ
ಒಣಗಿ ಹೋಗುವ ವೇಳೆ ಬಂದಿತೆ-
ನನ್ನ ಸಂಗತಿಯಿಂದೆ ?
ಕೆಣಕು ದೈವದ ನನ್ನ ತೆರದೊಳೆ
ಬಣಗುಬಾಳಾಯ್ತೇನು ನಿಮಗೆ ?
ಯಾರಿಗರುಪಿಸಲಿದನು ಮಾಲೆಯ-
ನಾರ ಕೊರಳೊಳಗಿರಿಸಲಿ ?
*****