ಹೃದಯದಾಕಾಶವಿದು ಅದುರಿ ಗಡ ಗದ್ದರಿಸಿ
ಪ್ರೇಮವಂಕುರಿಸಿ ಸೌರಭವು ಹಾರಿ
ಭೇದಿಸುತ ಸಪ್ತತಲ ಇಂದ್ರಚಂದ್ರರ ಲೋಕ
ಪಾರ ಅಪರಂಪಾರ ದೂರ ಸೇರಿ
ಆವ ಲೋಕವ ಕಾಣೆ-ದಿವ್ಯಜ್ಯೋತಿಯ ಕಂಡೆ
ಕಣ್ಣರಳಿ ಬಂತಾಗ ಭವ್ಯದೃಷ್ಟಿ
ಆವ ಆಶೆಯ ಪಾಶವೆಸಗಿಲ್ಲ ಬಿರುಗಾಳಿ
ಬೀಸಿ ಸೂಸಿತು ಈ ಪ್ರಕಾಶವೃಷ್ಟಿ
ನಲ್ಲನಲ್ಲೆಯ ಪ್ರೇಮ ಬಲ್ಲೆನೆಂಬುವ ಬಿರುದು
ಹದಿನಾಲ್ಕು ಲೋಕಕ್ಕೆ ತಟ್ಟಿಮುಟ್ಟಿ
ಎಲ್ಲೆಡೆಗೆ ವ್ಯಾಪಿಸಿತು ಬೆಳ್ಳಬೆಳು ಬೆಳಕಾಗಿ
ನನ್ನಲ್ಲೆ ಆ ಕಳೆಯ ಮೊಳಕೆ ಹುಟ್ಟಿ
ಉರಿದುರಿದು ಉರಿದೆದ್ದ ಆ ಊರ್‍ಮೆಯುರಿಯಲ್ಲಿ
ಒಂದಾಗಿ ಸದಾ ಸವಿಯನುಂಡೆ
ಸುರರು ಸುರಗುರು ಸೂರ್ಯಚಂದ್ರರೂ ಕಾಣದಾ
ಬೆಳಕಿನುನ್ಮಾದದಾ ಕಾಂತಿ ಕಂಡೆ
ಪ್ರೇಮದಾಚೆಯ ಊರ್‍ಮೆ ಪ್ರೇಮಕ್ಕೆ ಬೀಜವದು
ಪ್ರೇಮದಾ ಫಲವಾಗಿ ಫಲಿಸಿ ನಿಂದು
ಉಮ್ಮಳಿಸಿ ತನ್ಮಯತೆ ಪಾವಿತ್ರ್ಯ ಪರವಶತೆ
ಪರದೆಗಳ ಹರಿಹರಿದು ಸುಳಿದು ಬಂದು
ವೇದಶಾಸ್ತ್ರ ಪುರಾಣ ವರ ಕುರಾನಗಳೆಲ್ಲ
ಕುಣಿಕುಣಿದು ನನ್ನ ಊರ್‍ಮೆಯೊಳೆ ಹುಟ್ಟಿ
ಅಡಗಿಹವು ಇಡಗಿಹವು ಎಲ್ಲೆಡೆಗೆ ನುಡಿಯುವವು
ಊರ್‍ಮೆಕೂರ್‍ಮೆಯೆ ಭವ್ಯದಿವ್ಯ ಸೃಷ್ಟಿ
ಮರವು ಮತ್ಸರ ಕರಗಿ ಕಷ್ಟನಷ್ಟವು ಸುಟ್ಟು
ಭರದಿ ಭಸ್ಮಿಭೂತವಾಗಿ ಹಾರಿ
ಅರವು ಅಗಲಾಗಿ ಅದ್ಭುತದ ಅಘಟಿತ ಶಕ್ತಿ
ಹೆಡಕರಿಸಿ ಹೊಳೆದು ಕುಡಿಮಿಂಚುದೋರಿ
ಘನಸಿರಿಯ ಚಿನ್ಮಯ ಚಿದಾನಂದವನು ಕಂಡೆ
ಹೊರಮರೆದು ಒಳ ಉರ್‍ಮೆ ಕುದುರೆ ಏರಿ
ನೆನಪುದೋರಿತು ಇತ್ತ ಕನಸು ಹರಿಯಿತು ಅತ್ತ
ಹತ್ತುತಾಸಿನ ಹಿಗ್ಗು ಹಾಡನೇರಿ
*****