ನೆಲದ ರಸವನ ಹಿಂಡಿ ನೇಗಿಲಿನ ಮೊನೆಯಿಂದ
ಅನ್ನಮಂ ಪಡಯುವರು ಮಣ್ಣಿನಿಂದ-
ಜೋಡೆತ್ತುಗಳ ಕಟ್ಟಿ ಜೀವದೆಳೆಗಳ ತಂದು
ಲೋಕಮಂ ಸಲಹುವುದು ಮೋದದಿಂದ-
ಕೆರೆದೆಳೆದು ಸಾರಮಂ ಸಾಲಿನಲಿ ನಿಲಿಸುವುದು
ಹಸನೆಸಗಿ ಸವಿಯೂಡಿ ಸುಲಭದಿಂದ-
ತೆರೆದು ಬೇರಿಗೆ ದಾರಿ ಬೆಳೆವ ಹಾದಿಯ ತೋರಿ
ಪ್ರಾಣವೀವುದು ಜಗಕೆ ಚೆಲುವಿನಿಂದ-
ನೇಗಿಲೇ ಸಾಧನವು ಸಕಲ ಜನಕೆ
ಸಾಗಿಸಲು ಸಂಸಾರ ಮುಕ್ತಿಪಥಕೆ
ನಿರಪೇಕ್ಷೆಯಿಂ ನೆರೆದು ಧರ್‍ಮರಥಕೆ
ಕರವಿತ್ತು ನಡೆಸುವುದು ನೇಗಿಲರಕೆ-
ಧ್ಯಾನ ಧಾನ್ಯವ ಬಿತ್ತಿ ಎದೆಯ ಹಸನಂ ಗೆಯ್ದು
ಈ ನೇಗಿಲೇ ಮನವ ಹಗುರೆನಿಪುದು.
ಗಾನ ಮಾಡುವುದಿದುವೆ ಜೀವತಂತಿಯ ಮಿಡಿದು
ಪರಲೋಕ ಮಂತ್ರಗಳ ಹಾಡುತಿಹುದು
ಸರುವ ದುರಿತವ ಮರೆಸಿ ಮುಕ್ತಿಸುಧೆಯನ್ನೆರೆದು
ನರಕ ಬಾಗಿಲ ಮುಚ್ಚಿ ಸಗ್ಗ ತರೆದು
ನರಲೋಕ ಕರ್‍ಮಗಳ ಕಟ್ಟುಗಳ ಹರಿದೊಗೆದು
ಹಿರಿದೆನಿಸಿ ನೈಜಮಂ ತೋರಿಸುವುದು.
ಲೋಕಮಂ ಕಣ್ದೆರೆಸಿ ಜ್ಞಾನಯೋಗಿ
ವಾಕ್ಶುದ್ಧಿ ಗೆಯ್ವುದಿದು ಸತ್ಯಮಾಗಿ
ತ್ಯಾಗಿ ಈ ನೇಗಿಲೇ ಪರಮ ಭೋಗಿ
ನೇಗಿಲೇ ಧರೆಯಲ್ಲಿ ನಿತ್ಯ ಯೋಗಿ.
*****