ನಮ್ಮ ಮನೆಯ ಹೂದೋಟದಲ್ಲಿ | ಒಂದು ಗುಲಾಬಿ ಅರಳಿತ್ತು|
ಸುಂದರ ಗುಲಾಬಿ ಅರಳಿತ್ತು | ಕೆಂಪು ಗುಲಾಬಿ ಅರಳಿತ್ತು||
ಹಾದಿ ಬದಿಯಲಿ | ಹಾದು ಹೋಗುವರ | ಕಣ್ಮನ ಸೆಳೆದಿತ್ತು|
ಹೂವು | ಕಣ್ಮನ ಸೆಳೆದಿತ್ತು | ಹೂವೂ ಕಣ್ಮನ ಸೆಳೆದಿತ್ತು || ೧ ||
ಮುಂಜಾವಿನ ತಿರುಗಾಟಕೆ | ಹೊರಟ | ಹಿರಿಯರ ಸೆಳೆದಿತ್ತು |
ಹೂವು | ಹಿರಿಯರ ಸೆಳೆದಿತ್ತು | ದೇವರ ಪೂಜೆಗೆ ಹೂವು ಸಿಕ್ಕಿತೆಂದು ||
ಸಂತಸ ತಂದಿತ್ತು | ಹೂವು | ಸಂತಸ ತಂದಿತ್ತು || ಮನೆಯ ಕಾಯುತಿಹ |
ನಾಯಿಯ ಬೊಗಳಿಗೆ | ಹೂವದು ಉಳಿದಿತ್ತು | ನಮ್ಮ ಹೂವದು ಉಳಿದಿತ್ತು || ೨ ||
ಹೋಂ ವರ್ಕ್ ಮಾಡದ | ಶಾಲೆಯ ಹುಡುಗಗೆ | ಚಿಂತೆಯು ಕಾಡಿತ್ತು |
ಮಿಸ್ಸಿಗೆ ಹೂವಿನ | ಕಾಣಿಕೆ ಕೊಡುವ | ಉಪಾಯ ಹೊಳೆದಿತ್ತು!
ಹುಡುಗಗೆ | ಉಪಾಯ ಹೊಳೆದಿತ್ತು || ಕೈಗೆ ಎಟುಕದ ಗಿಡದ ಎತ್ತರಕೆ |
ಹೂವದು ಉಳಿದಿತ್ತು | ನಮ್ಮ ಹೂವದು ಉಳಿದಿತ್ತು || ೩ ||
ನಲ್ಲೆಯ ಕೋಪಕೆ | ನಲ್ಲನ ಮುಖವು | ಬಾಡಿ ಮುದುಡಿತ್ತು |
ಹುವನು ಕೊಟ್ಟು | ನಲ್ಲೆಯ ಒಲಿಸುವ | ಹುನ್ನಾರ ನಡೆಸಿತ್ತು ||
ಮನಸು | ಹುನ್ನಾರ ನಡೆಸಿತ್ತು || ಹೂವನು ಕೀಳುವ ಹೊತ್ತಿಗೆ ನಮ್ಮ |
ಬಾಗಿಲು ತೆಗೆದಿತ್ತು | ಮನೆಯ | ಬಾಗಿಲು ತೆಗೆದಿತ್ತು || ೪ ||
ಮಧುರಸ ಹೀರುವ | ದುಂಬಿಗೆ ಹೂವಿನ | ಸ್ವಾಗತ ಕಾದಿತ್ತು ||
ಕಟ್ಟುಕಟ್ಟಳೆ | ಆತಂಕವಿಲ್ಲದೆ | ದುಂಬಿಯು ನಲಿದಿತ್ತು ||
ಹೂವಿನ | ಮಡಿಲಲಿ ನಲಿದಿತ್ತು || ಕಾಲನ ಮಹಿಮೆಗೆ |
ಸೂರ್ಯನ ತಾಪಕೆ | ಹೂವದು ಬಾಡಿತ್ತು || ಒಣಗುತ ಉದುರಿತ್ತು || ೫ ||
ನಮ್ಮ ಮನೆಯ ಹೂದೋಟದಲ್ಲಿ | ಒಂದು ಗುಲಾಬಿ ಅರಳಿತ್ತು |
ಸುಂದರ ಗುಲಾಬಿ ಅರಳಿತ್ತು | ಕೆಂಪು ಗುಲಾಬಿ ಅರಳಿತ್ತು || ಪ ||
*****
೨೪-೦೨-೧೯೯೪