ಈ ಗೋಡೆಯಿಂದ ಆ ಗೋಡೆಗೆ
ಕಪಾಟಿನಿಂದ ಷೋಕೇಸಿಗೆ
ಮುಚ್ಚಿದ ಈ ಬಾಗಿಲಿನಿಂದ
ತೆರೆಯದ ಆ ಕಿಟಕಿಯವರೆಗೆ
ಹಾರಾಟ
ವಿಹ್ವಲ ತುಡಿತ
ಮನೆ ಹೊಕ್ಕ
ಜೋಗಿಣಿ ಹಕ್ಕಿಯ
ತಬ್ಬಲಿ ಅಲೆದಾಟ.
ಸುತ್ತ ಸುತ್ತಿ ಸುಳಿದು
ಒತ್ತಿ ಬಂದ ಕಂಪನ.
ಜನ್ಮಾಂತರದ ಮೂಲ
ಜಾಡು ತಡಕುತ್ತಾ
ತನ್ನದೇ ತಾವಿನ ಹುಡುಕಾಟ.
ಅಗೋ ಇಲ್ಲೆ ಇಲ್ಲೇ…..
ಹುಲ್ಲು ಕಡ್ಡಿ ಹತ್ತಿ
ಚೂರುಪಾರು ಮೆತ್ತನ್ನೆ ಹೂಬು
ಎಲ್ಲಿಂದೆಲ್ಲಿಂದಲ
ಹೊತ್ತು ತಂದು
ಮೈಮರೆತು ತೊಡಗಿದ್ದಕ್ಕೇ
ಚೆಂದದ ಗೂಡು ಹುಟ್ಟಿತ್ತು!
ಈಗ…. ಇಟ್ಟಿಗೆ ಸಿಮೆಂಟು
ಕಬ್ಬಿಣ ಕಲ್ಲು ರಾಡಿಬಣ್ಣ……
ಕಲ್ಲು ಕಟ್ಟಡದ ಉಸಿರು,
ಕರುಳರಿಯದ ಆಳದಲ್ಲಿ
ಹೂತು ಹೋದ ತಾವಿಗೆ
ಹಕ್ಕಿಯೇ ಅಪರಿಚಿತ!
`ಕೇಳೀತೆ ತನ್ನ ಮೊರೆ, ತನ್ನದೇ ತಾವಿಗೆ?’
ಗೂಡಿನ ಅಶರೀರ
ವಾಸನೆಗೆ ಸಿಕ್ಕು ಖಂಡಾಂತರ ದಾಟಿ
ಜೀವ ತಳಮಳಿಸುತ್ತಾ
ತವಗುಡುವ ಹಕ್ಕಿ ಎದೆಯಲ್ಲಿ
ಮುರಿದ ಮುಳ್ಳಿನಾಟ.
ಆಳ ಆಳದಿ ಮೊಗೆದು
ತುಣುಕು ಮಿಡುಕಿಗೆ
ಮಿಸುಕಲಾರದ ಕರುಳು!
‘ಕೇಳೀತೆ ತನ್ನ ಮೊರೆ ತನ್ನದೇ ತಾವಿಗೆ?’
*****