ತುಂಬಿಹುದು ತಾಯಿ ನನಗೆ ಒಂಬತ್ತು ತಿಂಗಳು
ಹೇಗೆ ಹುಟ್ಟಲಿ ನಾನು ಈ ಮಣ್ಣಿನಲ್ಲಿ?
ಮೇರೆ ಮೀರಿವೆ ಇಲ್ಲಿ ಜಾತಿ ಮತ ಧರ್‍ಮಗಳು
ಹೇಗೆ ಹುಟ್ಟಲಿ ನಾನು ಈ ಹುಣ್ಣಿನಲ್ಲಿ?
ತಾಯಿ ತಿನ್ನುವ ನೋವು ನನ್ನ ನೋವಾಗಿದೆ
ಜೀವ ಅರಳುತ್ತಿರಲು ಬಿಸಿಲ ಧಗೆ ಬಿದ್ದಿದೆ
ಹಸಿರು ಹಕ್ಕಿಯ ಬಸಿರ ಕುಕ್ಕಿತಿನ್ನುವ ಹದ್ದು
ಬಡಿದ ರೆಕ್ಕೆಯ ಸದ್ದು ಧೂಳೆದ್ದಿದೆ.
ಹೊಟ್ಟೆಯ ಒಳಗಿಲ್ಲಿ ಅಭಿಮನ್ಯು ಪಾಠ
ಚಕ್ರವ್ಯೂಹದ ಚಿತ್ರ ಅಚ್ಚೊತ್ತಿದೆ.
ಒಳಹೊಕ್ಕು ಹೊರಬರದ ಒಳಸಂಚು ಸಾವಿಗೆ
ಯಾಕೆ ಹುಟ್ಟಲೆಂದೀ ಜೀವ ಬೆಚ್ಚುತ್ತಿದೆ.
ಸಾವ ಸಂಭ್ರಮದಲ್ಲಿ ಕೀವು ತುಂಬಿದ ಕಣ್ಣು
ನೋಡೀತು ಹೇಗೆ ನನ್ನ ಹುಟ್ಟು?
ಮಗುವನ್ನು ಮಗುವೆಂದು ಎದೆತುಂಬಿ ಕರೆಯದೆ
ಮತಧರ್‍ಮ ಬೆರೆಸಿದರೆ ಏನು ಬಂತು?
*****