ಕತ್ತಲೆಲ್ಲ ಬೆತ್ತಲಾಗಿ
ಬೆತ್ತಲೆಲ್ಲ ಬೆಳಗಾಗಿ
ಕೆಂಪಾಗಲಿ ಕಪ್ಪು ನೆಲ.
ಛಿದ್ರ ಛಿದ್ರವಾಗಲಿ
ಬೇರು ಬೂದಿಯಾಗಲಿ
ತುಳಿದು ನಗುವ ಜಾಲ.
ಗುಡಿಸಲಿನ ಗರಿಗಳಿಂದ
ಮನೆ ಮನೆಯ ಮನಸಿನಿಂದ
ಹಾದಿ ಹೂಲದ ಎದೆಗಳಿಂದ
ಹುಟ್ಟಿ ಬರಲಿ ಇಲ್ಲಿ
ಹೋರಾಟದ ಹಾಡು.
ಅಸ್ಪೃಶ್ಯರ ಹಟ್ಟಿಯಲ್ಲಿ
ಮಾರ್‍ಕೆಟ್ಟಿನ ಮೂಲೆಯಲ್ಲಿ
ಕಾರ್‍ಖಾನೆಯ ಕೊಳವೆಯಲ್ಲಿ
ಅಚ್ಚೂತ್ತಲಿ ಎಲ್ಲೆಲ್ಲು
ಹೋರಾಟದ ಹುರುಡು.
ಮೇಲು ಜಾತಿ, ಕೀಳು ಜಾತಿ
ಬಡವನಿವ ಬಲ್ಲಿದ
ಅಡ್ಡನಿಂತ ಗೊಡ್ಡುಗೋಡೆ
ಧಿಕ್ಕಾರಕೆ ನಡುಗಲಿ
ಬುಡ ಕಳಚಿ ಬೀಳಲಿ.
ಇರುವ ನೆಲ ಹರಿವ ಜಲ
ಎಲ್ಲರದು-ನಾಡಿನದು
ಇದು ಸಂಘರ್ಷದ ಜಾಡು,
ಸಾವಿರಾರು ವರುಷದಿಂದ
ಬೇರು ಬಿಳಲು ಬಿಟ್ಟ ಆಲ-
ಸುಟ್ಟು ಹುಟ್ಟಿ ಬರುವ
ಇದು ಕೆಂಡದ ಹಾಡು.
*****