ನಡೆದಿಹೆನು ನಡೆದಿಹೆನು ಅಡವಿಯ ಅರಣ್ಯದಲಿ
ಮುಂಜಾನದಲ್ಲಿ ನಿನಗೆ ಕಾಣದೇನು?
ಕಡುಕತ್ತಲೆಯ ಸುತ್ತು ಬಿತ್ತರಿಸಿ ಮುತ್ತುತಿಹ
ಮೊದಲೆ ಬೆಳಕು ಕೊಡಲುಬಾರದೇನು?
ಕಂಟಿಕಲ್ಲಗಳೆಡವುತೆಡವುತ್ತ ಮುಗ್ಗರಿಸು –
ತಿರೆ ಎತ್ತಿ ನೀ ಹಿಡಿಯಬಾರದೇನು?
ಕುಂಠಿಸಿತು ಅಸುಶಕ್ತಿ ಸೋತು ಸಣ್ಣಾಗಿರಲು
ಕೈ ನೀಡಿ ನೀ ಕರೆಯಬಾರದೇನು?
ನಿರ್ವಾಣ ಸವಿಸುಖದ ಗೀರ್ವಾಣವಾಣಿಯನು
ಕೇಳ ಬಯಸುವೆ ಹೇಳಬಾರದೇನು?
ಸರ್ವ ಸಂಜೀವನದ ಸುಧೆಯ ಬಿಂದುವನೊಂದ
ಸುರಿದಮರನನು ಮಾಡಬಾರದೇನು?
ವಿಶ್ವಯಾತ್ರೆಗೆ ಹೊರಟ ದಾರಿಗನು ನಿನ್ನಲ್ಲಿ
ಶ್ರದ್ದೆಯಿಟ್ಟರೆ ತಿಳಿಯಬಾರದೇನು?
ವಿಶ್ವಮೂರ್ತಿಯೆ ಸಕಲ ನಾನೆಂದು ಹೊರಟಿರುವೆ
ಸರ್ವ ನೀನಾಗಿ ಬರಬಾರದೇನು?
ಬೆಳಕುಕತ್ತಲೆಗಳಾ ಗುರುತು ಹತ್ತದು ಇಲ್ಲಿ
ನೆಲೆಗೆಟ್ಟು ನನ್ನನ್ನೆ ಮರೆತೆ ನಾನು
ಸುಳಿವು ದೋರದೆ ನೀನು ನನ್ನಲ್ಲೆ ಅವಿತಿದ್ದು
ನನ್ನ ಮರೆವುದು ನಿನಗೆ ಉಚಿತವೇನು?
ಮರಬಳ್ಳಿ ಬಳಕುವವು ತುಳುಕುವವು ತೂಗುವವು
ನೀ ಕಣ್ಣು ತೆರೆದಿರಲು ಮಕರಂದವು
ಸ್ವರಸಂಪು ಇಂಪು ಇಂಚರ ಹಕ್ಕಿಗಳ ಹಾಡು
ಎಲ್ಲೆಲ್ಲಿ ಹೊಮ್ಮುವದು ಆನಂದವು.
ನಡೆನಡೆದು ದುಡಿದುಡಿದು ನಿನ್ನಿಂದ ಪಡೆಪಡೆದು
ನಿರ್ಮಿಸುವ ಉಪವನವ ನೋಡು ನೀನು
ಸಡಗರದ ನಂದನದ ಬನಸಿರಿಯ ಸೌರಭವ
ಸವಿಸವಿದು ಹರಕೆ ಕೊಡಬಾರದೇನು?
ಅಲೆದಲೆದು ಅರಸಿದರು ಲಭಿಸಲಾರದ ಕುಸುಮ
ನೀನಾಯ್ದು ನನಗೆ ಕೊಡಬಾರದೇನು?
ನಲಿನಲಿದು ಆ ಹೂವ ಹಾರ ಮಾಡುವೆ ನಿನಗೆ
ನಿನ್ನ ಹೂ ನೀ ಮುಡಿಯಬಾರದೇನು?
*****