ಕಾರ್ಖಾನೆಗಳಿಂದ
ಹೊರ ಬರುವ ಹೊಗೆ,
ವಾಹನಗಳಿಂದ ಬರುವ
ಪೆಟ್ರೋಲಿನ ವಾಸನೆಗೆ
ಉಸಿರುಗಟ್ಟಿಸುವ ಧಗೆ
ದುರ್ಗಂಧದ ಅಲೆಗೆ
ಹೆದರಿ ಓಡೋಡಿ ಸುಸ್ತಾಗಿ
ಶುದ್ಧ ಗಾಳಿ ಸಿಗದೆ
ಕಲುಷಿತಗೊಳಿಸಿದ
ಕೃತಕ ನಾಗರೀಕತೆಯ
ರಣ ಹದ್ದಿನ ಗೂಡಿಗೆ
ವಿಧಿಯಿಲ್ಲದೇ
ಮತ್ತೇ ಮರಳುತ್ತೇನೆ
ದುರಂತದ ಸುರಂಗದಲ್ಲಿ
ನಗರೀಕರಣ ನೆಪದಲ್ಲಿ
ಜಾತಿ ರಾಜಕೀಯದಲ್ಲಿ
ಸುಡಿಸಿಕೊಂಡು ನನ್ನೂರ ಗುಡಿಸಲುಗಳು
ನನ್ನ ಮನೆ ಮೇಲಿಂದ
ಹಾರಿಹೋಗುವ ವಿಮಾನಗಳು,
ರಸ್ತೆ ದರೋಡೆಗಳು,
ನ್ಯೂಟ್ರಾನ್ ಬಾಂಬುಗಳು
ಸದ್ದಿಲ್ಲದೇ ನನ್ನ ಜನಗಳ
ಕತ್ತು ಹಿಸುಕಿದೆ ನೋಡು.
ಗಿರಿಬೆಟ್ಟ ಗುಡ್ಡಗಳೆಲ್ಲ
ಹಸಿರುಟ್ಟು ನಲಿಯೋದು ಬಿಟ್ಟು
ವರ್ಷಗಳೇ ಕಳೆದವು.
ಬರಿದಾದ ಬೆಟ್ಟಗಳು
ಸುಡುಬಿಸಿಲಿಗೆ ಒಡಲೊಡ್ಡಿ
ಭಣಗುಡುವ ಕೆರೆಗಳು.
ಸಾವಿನ ಮುಖ ಕಪ್ಪು
ಬದುಕಿನ ಮುಖ ಹಸಿರು
ಕಿವಿ ಗಡಚಿಕ್ಕುವ
ಯಂತ್ರಗಳ ಶಬ್ದ-
ಕಿವಿಯಲ್ಲಿ ಹತ್ತಿಯಿಟ್ಟು
ನೋಡುವ ನೋಟದಲಿ
ಜೀವವಿಲ್ಲ ಹಸಿರಿಲ್ಲ.
ಸಾವಿನ ಕಪ್ಪು ಛಾಯೆ
ಹರಡಿದೆ ಬಾನೆಲ್ಲ.
*****