ನೆರೆಯವರು ನಕ್ಕರು:
“ಇವನಿಗೆ ಹುಚ್ಚು ಕಚ್ಚಿದೆ
ಮುಖದಲ್ಲಿ ದಿಗಿಲು ಬಿಚ್ಚಿದೆ
ಹುಲಿಕಣ್ಣೆಲ್ಲೋ ದಿಟ್ಟಿಸಿ ನೋಡಿದೆ
ಮೊಸರನ್ನದ ಬಲಿಕೊಟ್ಟರೆ
ಹೊಸದನಿ ಮಾಯುತ್ತದೆ.
ಇವನು
ಹೊಸಿಲು ದಾಟದಂತೆ ಕಾಯುತ್ತದೆ.”
ಅವರಿಗೇನು ಗೊತ್ತು
ಪ್ರತಿ ರಾತ್ರಿ
ಅಧೋಲೋಕಗಳ ಕದ ತೆರೆಯುತ್ತದೆ,
ಒಳಗಿನ ವಿಧವಿಧ ದೃಶ್ಯ
ಎದೆಯಾಳಕ್ಕಿಳಿಯುತ್ತದೆ.
ನೆಲ ಬಿರಿಯುತ್ತದೆ
ನಭ ಕೆನೆಯುತ್ತದೆ
ಅರ್ಥ ಸಿಗದ ಕೂಗು
ಆಕಾಶಕ್ಕೆ ಪುಟಿದು
ನಿದ್ದೆ ಎಚ್ಚರಗಳ ನಡುವೆ
ಗಡಿಯೆ ಮಾಸುತ್ತದೆ.
ಅರಿಯಬಾರದ ಸನ್ನೆ ಮುಗಿಲ ಮುಖದಲ್ಲಿ ಮೂಡಿ
ಒಳಗಿನ ಕನ್ನೆಗೆ ಫಕ್ಕನೆ
ಗುರುತು ಹತ್ತುತ್ತದೆ.
ಆಗ ಮುಗಿಲಿಗೆ ಮೃದಂಗದ ದನಿ
ಮಾತು ಮಣಿಹನಿ
ಕನ್ನೆಯ ಎದೆಯೋ
ಹೊನ್ನರಾಗದ ಗಣಿ.
*****