ಜೋಲು ಮೋರೆಯ ಮಾಡಿ
ಕಲ್ಲ ಮೇಲೆಯೆ ಕುಳಿತ
ನಲ್ಲೆಯೊಬ್ಬಳು – ಬಳಿಯೆ ಹೂವು ಚೆಲ್ಲಿತ್ತು.
ಯಾರಿಲ್ಲ ಬಳಿಯಲ್ಲಿ, ಮೇರು ವ್ಯಥೆ ಮನದಲ್ಲಿ
ಯಾರದೋ ವ್ಯಸನ, ಆವದೋ ಚಿಂತನ
ಮಾರುತನ ಮಂದ ಅಲೆ ತುಂಬುತಿದೆ ಮನ
ಜಾರುತಿದೆ ಸೆರಗು, ಏರುತಿದೆ ಮೆರಗು-ಅರಿವಿಲ್ಲವಲ್ಲಿ
ಏನೊ ಆ ಕೊರಗು
ಏಕೊ ಆ ಸೊರಗು
ಏಕೋ ಕುಂದಿಹ ನೋಟ
ಏನೊ ಕನಸಿನ ಆಟ
ನೇಹ ಸುಂದರವಿತ್ತೆ?
ಗೇಯ ಗೆಲುವಾಗಿತ್ತೆ?
ಮಾಯೆ ಒಲುಮೆಯ ಬಲಿತು
ಮೋಹ ಹೃದಯದಲಿತ್ತೆ??
ಭಾವ ತುಂಬಿತ್ತು ಆಕ್ಷೀಣ ಉಸಿರಿನಲಿ,
ಜೀವ ಮಿಡುಕುತಲಿತ್ತು
ತೇವ ಕಂಗಳಲಿತ್ತು;
ನೋವು ಸೇರಿತ್ತು ಆ ವಿರಹದೊಸರಿನಲಿ
……ಹಕ್ಕಿಗಳ ಸಾಲೊಂದು ಗೂಡಿಗೋಡುತ್ತಲಿತ್ತು
ರೆಕ್ಕೆಗಳ ಬಡಿಯುತ್ತ
ಅಕ್ಕರದಿ ಕರೆಯುತ್ತ
ದಕ್ಕಲಾರದ ಆಶೆ, ದುಃಖ ಜೀವಕ್ಕಿತ್ತು
ಮುಂದೋಡುತಿತ್ತು!
ಎಲ್ಲ ನಲ್ಲುಲಿಯು ಚೆಲ್ಲಿ ಹೋದಂತಿತ್ತು!
ಅಲ್ಲಿ ಹೃದಯದ ವೀಣೆ
ಸೊಲ್ಲ ಮಿಡಿವುದ ಕಾಣೆ…..
ಗಲ್ಲದಲ್ಲೊಂದು ತೊಟ್ಟು ಮೆಲ್ಲನಿಳಿಯುತ್ತಿತ್ತು.
*****