ಪ್ರಿಯ ಸಖಿ,
ಅವಳು. ದಿನವೂ ಯಾರದಾದರೂ ಮನೆಯ ಜಗುಲಿಯ ಮೇಲೆ ತನ್ನ ದೊಡ್ಡ ಬಟ್ಟೆಯ ಗಂಟನ್ನು ಇಟ್ಟುಕೊಂಡು ಕೂರುತ್ತಾಳೆ. ಸದಾ ಬಾಯಿ ವಟಗುಟ್ಟುತ್ತಲೇ ಇರುತ್ತದೆ ಕೆಲವೊಮ್ಮೆ ಯಾವುದಾದರೂ ಹಾಡನ್ನು ರಾಗವಾಗಿ ಹಾಡುತ್ತಿರುತ್ತಾಳೆ. ಇನ್ನೊಮ್ಮೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕಿಯಂತೆ ಜೋರು ಜೋರಾಗಿ ಏನನ್ನೋ ಹೇಳುತ್ತಿರುತ್ತಾಳೆ. ಕೆಲವೊಮ್ಮೆ ಎತ್ತರದ ದನಿಯಲ್ಲಿ ಬಯ್ಯುತ್ತಿರುತ್ತಾಳೆ. ಇಂಗ್ಲೀಷನ್ನು ಅರೆದು ಕುಡಿದವಳೇನೋ! ನಿರರ್ಗಳವಾಗಿ ಇಂಗ್ಲೀಷಿನಲ್ಲಿ ಏನೇನೋ ವದರುತ್ತಿರುತ್ತಾಳೆ. ಶಿಷ್ಟ ಭಾಷೆಯಲ್ಲಿ ಹೇಳುವುದಾದರೆ ಅವಳೊಬ್ಬ ಮನೋರೋಗಿ. ಆಡುಭಾಷೆಯಲ್ಲಿ ಹೇಳುವುದಾದರೆ ಅವಳೊಬ್ಬ ಹುಚ್ಚಿ!
ನೋಡಲು ಲಕ್ಷಣವಾಗಿರುವ, ಸುಸಂಸ್ಕೃತ ಮನೆತನದವಳೆನಿಸುವ ಮಧ್ಯ ವಯಸ್ಸಿನ ಈ ಹೆಣ್ಣಿಗೆ ಅದ್ಯಾವ ಆಘಾತವಾಗಿರಬಹುದು? ಅವಳ ಬುದ್ದಿ ಕೆಡಲು ಕಾರಣರಾರು? ಸಮಾಜವೇ? ಮನೆಯವರೇ? ಮಿತ್ರರೇ? ಶತ್ರುಗಳೇ? ಹೆದರಿಕೆ ಹುಟ್ಟಿಸುವಂಥಾ, ಅಸಹ್ಯಗೊಳ್ಳುವಂತಾ ವೇಷ ತೊಟ್ಟು, ತಲೆಬಿರಿದುಕೊಂಡು, ಚಂಡಿಚಾಮುಂಡಿಯಂತೆ ಅಟ್ಟಹಾಸದಿ ನಗುತ್ತಾ, ಬೈಯ್ದುಕೊಳ್ಳುತ್ತಾ ತಿರುಗುವ ಇವಳು ಹೀಗೇಕಾದಳು?
ತಿನ್ನಲು ಏನಾದರೂ ಕೊಟ್ಟರೆ Thanks ಎಂದು ಹೇಳುವಷ್ಟು ಬುದ್ಧಿಯೂ, ತನ್ನನ್ನು ಕಲ್ಲಿನಿಂದ ಹೊಡೆಯಬಂದವರಿಗೆ ತಾನೂ ಕಲ್ಲಿನಿಂದ ಹೊಡೆದಟ್ಟಬೇಕೆಂಬ ಮಾನವ ಸಹಜ ತಿಳುವಳಿಕೆ ಇರುವ ಇವಳ ಸರಿಪಡಿಸಲಾಗುವುದಿಲ್ಲವೇ? ಅಥವಾ ಅವಳು ಸರಿಯಾಗುವುದು ಯಾರಿಗೂ ಬೇಕಿಲ್ಲವೇ? ಅವಳನ್ನು ಹುಚ್ಚಿಯಾಗಿಸಿದ ಸಮಾಜಕ್ಕೆ ಅವಳನ್ನು ಸರಿಪಡಿಸುವ ಜವಾಬ್ದಾರಿಯೂ ಇರಬೇಕಲ್ಲವೇ?
ಅವಳನ್ನೊಂದು ಮನರಂಜನೆಯ ವಸ್ತುವನ್ನಾಗಿ ಮಾಡಿಕೊಂಡು ಅವಳನ್ನು ಹಿಂಸಿಸಿ. ಗೋಳು ಗುಟ್ಟಿಸಿ, ಕಲ್ಲಿನಿಂದ ಹೊಡೆದು ತಮ್ಮ ವಿಕೃತ ಮನೋಭಾವವನ್ನು ಪ್ರದರ್ಶಿಸುವ ವ್ಯಕ್ತಿಗಳನ್ನು ಕಂಡಾಗ ಯಾರಿಗೆ ಹುಚ್ಚು? ಅವಳಿಗೋ? ಇವರಿಗೋ? ಅನಾಗರೀಕರಂತೆ ವರ್ತಿಸುತ್ತಿರುವ ಇವರು ಮನುಷ್ಯರೋ ಅಥವಾ ಮೃಗಗಳೋ ಎಂಬ ಪ್ರಶ್ನೆ ಕಾಡುತ್ತದೆ. ಬುದ್ಧಿ ಸ್ಥಿಮಿತದಲ್ಲಿಲ್ಲದಿದ್ದರೂ ತನ್ನನ್ನು ಹಿಂಸಿಸದವರಿಗೆ ಏನೂ ಮಾಡದೆ ತನಗೆ ತೊಂದರೆ ಕೊಡುವವರಿಗೆ ಮಾತ್ರ ತಾನೂ ತೊಂದರೆ ಕೊಡುವ ಆ ಹೆಂಗಸು ಬುದ್ಧಿ ಸರಿಯಿದ್ದೂ, ಅಮಾನವೀಯವಾಗಿ ಅವಳನ್ನು ಹಿಂಸಿಸಿ ಕಿರುಕುಳ ನೀಡುವ ಇಂತವರಿಗಿಂತಾ ಎಷ್ಟೋ ಮೇಲು ಎಂದೆನಿಸುತ್ತದೆ.
ಕಲ್ಲುಗಳಂದಾದ ಗಾಯದಿಂದ ಒಸರುವ ರಕ್ತಕ್ಕೆ ಮಣ್ಣು ಮೆತ್ತಿಕೊಳ್ಳುತ್ತಾ, ಕಣ್ಣಿನಲ್ಲಿ ನೀರು ಸುರಿಸುತ್ತಾ ಆ ಹೆಂಗಸು ‘ರಾಕ್ಷಸರು! ರಾಕ್ಷಸರು!’ ಎಂದುಕೊಳ್ಳುತ್ತಾ ಹೋಗುವಾಗ, ಬುದ್ಧಿ ಸರಿಯಿಲ್ಲದವರೂ, ಹಲವು ಬಾರಿ ನಿಜವನ್ನೇ ನುಡಿಯುತ್ತಾರಲ್ಲಾ? ಎಂದೆನಿಸುತ್ತದೆ ಅಲ್ಲವೇ ಸಖಿ?
*****