ಧರ್ಮಭೂಮಿ ಎನಿಸಿಕೊಂಡಿರುವ ಭಾರತದ ಇತಿಹಾಸದುದ್ದಕ್ಕೂ ಸಾಧುಸಂತರು, ಭಕ್ತಶ್ರೇಷ್ಠರು, ವೇದಾಂತಿಗಳು, ಮಹಾತ್ಮರೂ ಜನ್ಮತಾಳಿ ತಮ್ಮ ತತ್ವಜ್ಞಾನವನ್ನು ಜನತೆಗೆ ನೀಡಿದ್ದಾರೆ. ಅಂತಹ ಭಕ್ತರಲ್ಲಿ ತಮಿಳುನಾಡಿನ ಭಕ್ತಪರಂಪರೆಯಲ್ಲಿ ಅಗ್ರಗಣ್ಯರಾದ ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು ಆಂಡಾಳ್. “ಆಂಡಾಳ್” ಎಂದರೆ ಆಳಿದವಳು ಎಂಬ ಅರ್ಥ ಬರುತ್ತದೆ. ತನ್ನ ಅನನ್ಯ ಭಕ್ತಿಯಿಂದ ಪರಮಾತ್ಮನ ಮನವನ್ನು ಗೆದ್ದು ಆಳಿದವಳು “ಆಂಡಾಳ್”. ಉತ್ತರ ಭಾರತದಲ್ಲಿ ಜನಿಸಿ ಶ್ರೀಕೃಷ್ಣನಿಗೆ ಒಲಿದ ಭಕ್ತ ಮೀರಾಳಂತೆ ದಕ್ಷಿಣ ಭಾರತದಲ್ಲಿ ಶ್ರೀಕೃಷ್ಣನನ್ನೇ ಪತಿಯೆಂದು ಪರಿಗಣಿಸಿದ ಭಕ್ತೆ “ಆಂಡಾಳ್”.
ಆಂಡಾಳ್ ಸೀತೆಯಂತೆ ಭೂಮಿಯಲ್ಲಿ ದೊರೆತ ಅಯೋನಿಜೆ, ಆಂಡಾಳ್ ದೇವಿಯ ಕಥೆ ಸುಂದರವಾದ ಪೌರಣಿಕ ಕಥೆಯಂತಿದ್ದರೂ, ಇದು ಸತ್ಯ ಘಟನೆ. ಇದನ್ನು ಹಲವಾರು ವಿದ್ವಾಂಸರೂ, ಸಂಶೋಧಕರೂ ಆಳವಾಗಿ ಅಭ್ಯಾಸ ಮಾಡಿ ಹಲವಾರು ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ.
ಆಂಡಾಳ್ ಅವತರಿಸಿದ ಕಾಲ ಕ್ರಿ.ಶ. ೭-೮ ಶತಮಾನಗಳ ಮಧ್ಯಭಾಗವೆಂದೂ, ತಮಿಳುನಾಡಿನ ಪಾಂಡ್ಯ ದೇಶದ ರಾಜ ವಲ್ಲಭದೇವನ ಕಾಲವೆಂದೂ ವಿದ್ವಾಂಸರ ಅಭಿಪ್ರಾಯ. ಆದರೆ ಉಪನ್ಯಾಸಕರನೇಕರ ಅಭಿಪ್ರಾಯ ಆಂಡಾಳ್ ಜನನ ಕಲಿಯುಗ ಆರಂಭವಾಗಿ ಇನ್ನೂರು ವರ್ಷಗಳಿಗೆ ಸರಿಯಾಗಿ ಎಂದು. ಏನೇ ಇದ್ದರೂ ಆಂಡಾಳ್ ಕಾಲ್ಪನಿಕ ವ್ಯಕ್ತಿಯಲ್ಲ. ಆಂಡಾಳ್ ದೊರೆತ ತುಳಸೀವನ, ಆಂಡಾಳ್ ದೇವಿಯ ಸಾಕು ತಂದೆ ಪೆರಿಯಾಳವಾರ್ ಸನ್ನಿಧಿ. ಅವರಿಬ್ಬರೂ ಪೂಜಿಸಿದ ವಟಪತ್ರಶಾಯಿ ದೇವಾಲಯ, ಇವೆಲ್ಲವೂ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಶ್ರೀವಿಲ್ಲಿಪುತ್ತೂರಿನಲ್ಲಿ ಈಗಲೂ ಇವೆ. ಆಂಡಾಳ್ ದೇವಿಯ ಅನನ್ಯ ಭಕ್ತಿಗೆ ಒಲಿದು ಆಕೆಯ ಕೈಹಿಡಿದ ಶ್ರೀರಂಗನಾಥನ ದೇವಾಲಯ ಈಗಿನ ತಿರುಚ್ಚಿನಾಪಳ್ಳಿ ಜಿಲ್ಲೆಯ ಶ್ರೀರಂಗ ಕ್ಷೇತ್ರಗಳನ್ನು ಸಂದರ್ಶಿಸಿ ಭಗವಂತನನ್ನು ಹಾಡಿ ಸ್ತುತಿಸಿದಳೆಂದು ತಿಳಿದುಬರುತ್ತದೆ. ಅವುಗಳಲ್ಲಿ ತಿರುವರಂಗಂ ಪೆರಿಯಕೋಯಿಲ್ (ಶ್ರೀರಂಗಂ), ತಿರುಕ್ಕಣ್ಣಪುರಂ, ತಿರುಮಾಲಿರಂ ಚೋಮಲೈ (ಅಯ್ಯಗರ್ ಕೋಯಿಲ್), ತಿರುವೇಂಗಡಂ (ತಿರುಪತಿ) ಮುಂತಾದವು ಮುಖ್ಯವಾದವು.
ಆಂಡಾಳ್ ದೇವಿಗೆ ಹಲವಾರು ಹೆಸರುಗಳಿವೆ. ಭೂಮಿಯಲ್ಲಿ ದೊರೆತವಳಾದ್ದರಿಂದ ‘ಗೋದಾದೇವಿ’ ಎಂದೂ ಮಹಾಲಕ್ಷ್ಮಿಯ ಅವತಾರವಾದ್ದರಿಂದ ‘ನೀಳಾದೇವಿ’ ಎಂದೂ, ತಾನೂ ಮೊದಲು ಹೂ ಮುಡಿದು ಆ ಹೂಗಳನ್ನೇ ಭಕ್ತಿಭಾವದಿಂದ ಭಗವಂತನಿಗೆ ಅರ್ಪಿಸಿದುದರಿಂದ “ಶೂಡಿಕ್ಕುಡುತ್ತ ನಾಚ್ಚಿಯಾರ್” ಎಂದೂ ಹೆಸರುಗಳುಂಟು.
ಗೋಕುಲದ ಗೋಪ ಕನೈಯರು ಕಾತ್ಯಾಯಿನೀ ವ್ರತವನ್ನು ಆಚರಿಸಿ ತಮ್ಮ ಪ್ರಾಣೇಶ್ವರನನ್ನು ಪಡೆದಂತೆ ಆಂಡಾಳ್ ತನ್ನ ಗೆಳತಿಯರೊಂದಿಗೆ ಪ್ರಾಣೇಶ್ವರನ ಪ್ರಾಪ್ತಿಗಾಗಿ ಆಚರಿಸಿದ ವ್ರತವೇ “ತಿರುಪ್ಪಾವೈ”. ಮೂವತ್ತು ಹಾಡುಗಳುಳ್ಳ ಈ ಸುಂದರ ಗ್ರಂಥವನ್ನು ಆಂಡಾಳ್ ತಾನೇ ರಚಿಸಿ ಹಾಡಿದ್ದಾಳೆ. ‘ತಿರು’ ಎಂದರೆ ಒಳ್ಳೆಯ, ‘ಪಾವೈ’ ಎಂದರೆ ವ್ರತ. ಈ ವ್ರತದ ಫಲ ಕಾಲಕಾಲಕ್ಕೆ ವೃಷ್ಟಿ, ಕನ್ಯೆಯರಿಗೆ ಸೌಮಾಂಗಲ್ಯ ಪ್ರಾಪ್ತಿ. ಅವರವರಿಗೆ ತಮ್ಮ ತಮ್ಮ ಇಷ್ಟ ಕಾರ್ಯ ಸಿದ್ಧಿ ಮತ್ತು ಮೋಕ್ಷ ಸಾಧನೆಗೆ ಮಾರ್ಗ ಈ “ತಿರುಪ್ಪಾವೈ”.
ಈ ತಿರುಪ್ಪಾವೈಯನ್ನು ಶ್ರೀ ವೈಷ್ಣವ ದೇವಾಲಯಗಳಲ್ಲಿ ಧನುರ್ಮಾಸ (ಮಾರ್ಗಶಿರ)ದ ಮೂವತ್ತು ದಿನಗಳೂ ಉಪನ್ಯಾಸ ಮಾಡುತ್ತಾರೆ. ಈಗಾಗಲೇ ಎಷ್ಟೋ ಮಹಾನುಭಾವರು ಈ ಗ್ರಂಥವನ್ನು ಕನ್ನಡ, ತೆಲುಗು ಮತ್ತಿತರ ಭಾಷೆಗಳಿಗೆ ಭಾಷಾಂತರಿಸಿದ್ದಾರೆ. ಡಾ|| ಎಂ. ಎಲ್. ವಸಂತಕುಮಾರಿಯವರು ಹಾಡಿರುವ ತಿರುಪ್ಪಾವೈ ಕ್ಯಾಸೆಟ್ಟುಗಳು ಕೂಡಾ ಬಿಡುಗಡೆಯಾಗಿವೆ. ಈ ತಿರುಪ್ಪಾವೈಯನ್ನು ಪಾರಾಯಣ ಮಾಡಿದವರಿಗೆ ಸಕಲ ಇಷ್ಟಾರ್ಥ ನೆರವೇರುತ್ತದೆಂಬ ಹಿರಿಯ ನುಡಿಯಂತೆ ನಾವೂ ಭಕ್ತಿಭಾವದಿಂದ ಈ ಗ್ರಂಥವನ್ನು ಓದೋಣ.
*****