ಜಗಜ್ಯೋತಿಯೇ ಯುಗ ಜ್ಯೋತಿಯೇ
ಮಹಾಂತ ಮಹಿಮನೆ ಬಸವಣ್ಣ || ಪ ||
ಏಕ ದೇವನನು ನಂಬಿದೆ ತೋರಿದೆ
ನೀನೇ ಇಂದಿಗು ಗತಿಯಣ್ಣ || ಅ.ಪ.||
ಒಂದೊಂದು ಜಾತಿಗೊಂದೊಂದು ದೈವ
ದೇವರು ಜಾತಿಗಳಗಣಿತವು
ಜಾತಿಯೊಂದೆ ಮನುಕುಲವು ದೈವವೂ
ಒಂದೇ ಸಾರಿದೆ ಸನ್ಮತವು || ೧ ||
ಒಬ್ಬನೇ ದೇವನು ಸರ್ವಕೆ ಒಡೆಯನು
ಇನ್ನೊಬ್ಬನಿಗೆಲ್ಲಿಯ ಜಾಗ
ಅನೇಕ ದೇವರ ಕಲ್ಪನೆ ಸಮಾಜ
ದನೈಕ್ಯ ಭೇದದ ರೋಗ || ೨ ||
ವಿಶ್ವವನ್ನು ತುಂಬಿರುವ ಲಿಂಗವನು
ಅಂಗದಲ್ಲಿ ಸಾಕಾರಗೊಳಿಸಿದೆ
ವಿಶ್ವ ಜೀವರಲಿ ವಿಶ್ವೇಶನ ಕಂಡೆ
ವಿಶ್ವಮಾನವನ ರೂಪುಗೊಳಿಸಿದೆ || ೩ ||
ಸಂಕೇತ ರೂಪ ಇಷ್ಟಲಿಂಗವದು
ಸಕಲವು ಅವನದೆ ರೂಪಗಳು
ಒಬ್ಬನೆ ಈಶ್ಚರ ಅವನೆ ಲಿಂಗ ಶಿವ
ಸಲ್ಲವು ಕಲ್ಪನೆ ರೂಪಗಳು || ೪ ||
ಪ್ರಾಣಲಿಂಗಕೆ ಕಾಯುವೆ ಸೆಜ್ಜೆ
ಅವಗೇಕೆ ಗುಡಿಯ ಗೊಡವೆ
ವಿಶ್ಚದ ಲಿಂಗಕೆ ಗಗನವೆ ದೇಗುಲ
ಅವಗೆಂಥ ಪೂಜೆ ಒಡವೆ || ೫ ||
ಮೂರ್ತಿ ಪೂಜೆಯಲಿ ಭವ್ಯ ಗುಡಿಗಳಲಿ
ಹಣದ ಸ್ವಾರ್ಥವುಂಟು
ದೇವರ ವ್ಯಾಪಾರಿಗಳನು ಖಂಡಿಸಿ
ತೋರಿದೆ ನೇರದ ನಂಟು || ೬ ||
*****