ಕಾವಡಿ ತಕ್ಕೊಂಡು ಕಾಶಿಯನು ಸಾರಿರಲು
ಗಂಗೆಯಲಿ ಕೆಸರಿತ್ತು ಹಾದಿಯಲಿ ಧೂಳಿತ್ತು
ವಿಶ್ವನಾಥನಿಗೆ ಮೈಲಿಗೆಯಾಗಿ ಅವನಾಗಿದ್ದ ಕಲ್ಲು!
ಪಾಪಿಗಳ ಬೀಡಾರವಾಗಿತ್ತು ವಾರಣಾಸಿ
ಸಾರನಾಥವು ಆಗಿತ್ತು ಅಸ್ತಿರಾಶಿ!
ದ್ವಾರಕದಿ ನೋಡಿದೆನು ಗೋಪಾಲ ನಿರಲಿಲ್ಲ!
ಕೇದಾರದಲ್ಲಿದ್ದೆ ಘನಹಿಮವದಾಗಿತ್ತು ಪ್ರಕೃತಿ ಜೀವ
ದೇವನಿರಲಿಲ್ಲ ಅಲ್ಲಿ! ಶಿವನಲ್ಲಿ ಕಾಣದಾದ!
ಆಬೆಟ್ಟ, ಈತೀರ್ಥ, ಈಸರಸು, ಆಉದಧಿ
ಎಲ್ಲೆಲ್ಲಿ ಹುಡುಕಿದರು ಸಿಗಲಿಲ್ಲದಾಹಶಾಂತಿ!
ದೊಡ್ಡವರ ಹುಡಿಕಿದನು! ಹೆಡ್ಡ! ಕೊಡುನಿನ್ನ ಬಿಸಿರಕ್ತ ಎಂದರವರು……
ಅರಿಯದಲೆ ದಾರಿಯನು ನಿಂತೆ ನೀರವದಲ್ಲಿ
“ಜಗದೊಳಗೆ ಕೀಳ ನೋರ್ವನ ಹುಡುಕು
ಅವನೊಳಗೆ ಹರಿಯುವುದು ಜೀವನದಿ”
ಎಂತೆಂಬ ಒಳಧನಿಯ ಕೇಳುತಲೆ……….. ಹುಡುಕಿದೆನು!
ಎತ್ತಲೂ, ಯಾರೂ, ಇರಲಿಲ್ಲ, ನನಗಿಂತ ಕೀಳು!
ನನ್ನೊಳಗೆ ನಾನೆಂದೆ-“ಹುಡುಕು ನಿನ್ನೊಳಗೆ”-ನಿಂತೆ……
ನಿಂತ ನಿಲುವಿಗೆ ಸಂತು ಸಂತಸದ ವರತೆ! ಕರಗಿ ನೀರಾದೆ
ಹರಿದು ತೊರೆಯಾದೆ! ಮುಕ್ತಿಸಾಗರದಿ ರಾಸಲೀಲೆ!
ಆದಕಾಗಿ ನನಗಿಹುದು ಆಹ್ವಾನ!……………
ಪಡೆಯುವೆನು ಪರಸಾದ! ಹಡೆಯುವೆನು ಸುಖಶಾಂತಿ
ಮುಡುಪಾಯ್ತು ಎನ್ನ ಜೀವ! ಕೇಳೆನ್ನ ಜೀವ!
*****