ಈಚೆಗೆ ಯಾಕೋ ತುಂಬ
ಸಣ್ಣಗಾಗಿದ್ದೀರಿ ಅಂತ
ಗೆಳೆಯರು ಪರಿಚಿತರೆಲ್ಲ ಹೇಳಲು ಶುರುಮಾಡಿದರು.
ನನಗೇನಾಗಿದೆ ಧಾಡಿ
ಧಾಂಡಿಗನಂತಿದ್ದೀನಿ –
ಆಂತಾ ದಿನಾ ಹೇಳಿ ಹೇಳಿ
ಬಾಯಿ ಒಣಗಿ ಹೋಯಿತು.
ಮೊನ್ನೆ ಇವಳೂ ಒಮ್ಮೆ
ಮೆಲ್ಲಗೆ ಹತ್ತಿರ ಬಂದು
“ಯಾಕೀಥರ ಇದ್ದೀರಿ ?
ಪೂರಾ ಬಾಡಿದ್ದೀರಿ,
ನನ್ನೆದುರೂ ಗುಟ್ಟೆ” ಅಂತ
ಕಣ್ಣಲ್ಲಿ ನೀರು ತಂದಳು.
ಯಾಕೋ ವಿಪರೀತಕ್ಕೆ ಹೋಗುತ್ತಿದೆ ಎನಿಸಿತು
ನುಂಗಿದ್ದನ್ನು ಕಕ್ಕದೆ ವಿಧಿಯಿಲ್ಲ ಎನಿಸಿತು.
ನಾಡಿಗ ಬಂದರು ಮೊನ್ನೆ
ಮೇಲೆ ಬನ್ನಿ ಅಂದೆ.
ಪಕ್ಕ ಕೂತು ದನಿ ತಗ್ಗಿಸಿ
ಆಪ್ತವಾಗಿ ಹೇಳಿದೆ :
“ಬಲು ರಹಸ್ಯ ವಿಷಯ ನೋಡಿ
ಗೇಟು ದಾಟುವಂಥದಲ್ಲ
ಇವಳಿಗಂತೂ ಅಪ್ಪಿತಪ್ಪಿ ಕೂಡ ತಲುಪುವಂಥದ್ದಲ್ಲ.
ಹೇಗೆ ಹೇಳಲೆನ್ನುವುದೇ ತಿಳಿಯುತ್ತಿಲ್ಲ” ಎಂದೆ.
ಏನು ಹೊಳೆಯಿತೋ ಕವಿಗೆ
ಕಣ್ಣುಹೊಡೆದು ನಕ್ಕರು:
ತಿವಿಯುವಂತೆ ನಕ್ಕು ನೋಡಿ ‘ರಸಿಕರಪ್ಪಾ’ ಎಂದರು
“ಹೇಳಿ ಯಾಕೆ ಸಂಕೋಚ?
ಇಂಥದೆಲ್ಲ ಇದ್ದದ್ದೇ
ಋಷಿಗಳೇನು ನಾವು ನೀವು ?
ಕೆರೆಗೆ ಅವರೂ ಬಿದ್ದದ್ದೇ !
ಉಪ್ಪು ಕಾರ ತಿನ್ನುವಂಥ ದೇಹ ತಾನೆ ನಮ್ಮದೂ ?
ನನಗೂ ಹಿಂದೆ ಬಳ್ಳಿಯೊಂದು ಕಾಲ್ಕಟ್ಟಿದ್ದುಂಟು
ಹೂ ಬಿಡಿಸಲು ಕೆರೆಗಿಳಿದರೆ
ಮಂಡಿತನಕ ಕಾಲು ಹೂತು ಒದ್ದಾಡಿದ್ದುಂಟು!
ಹೇಗೋ ಬಳ್ಳಿ ಕಳಚಿಕೊಂಡೆ
ಕಾಲು ಮೇಲೆ ಎಳೆದುಕೊಂಡೆ
ಮನ್ಮಥನಿಗೆ ಜಯವಾಗಲಿ, ಬದುಕಿಕೊಂಡೆ!” ಎಂದರು
ಕವಿಯ ಮಾತು ಕೇಳಿ ನನಗೆ
ನಗು ಉಕ್ಕಿತು ಒಳಗೆ
“ಅಯ್ಯೋ ಹುಚ್ಚು ಬ್ರಾಹ್ಮಣ !
ನಿಮ್ಮ ಥರದ್ದಲ್ಲ ನಂದು, ಎಂಥದೋ ಪುರಾಣ,
ಬಲು ವಿಚಿತ್ರ ಸಂಗತಿ.
ಕೇಳಿದವರು ನಂಬಲೂ
ಶಂಕೆ ಪಡುವ ಸಂಗತಿ.
ಈಚೆಗೆರಡು ತಿಂಗಳಿಂದ
ಎಂಟು ಹತ್ತು ದಿನಕ್ಕೊಮ್ಮೆ
ಭೂತವೊಂದು ಬರುತ್ತಿದೆ
ಈ ರೂಮಿಗೆ ಗೊತ್ತೆ ?”
ನೋಡಿದೆ ಕವಿಯತ್ತ.
ಗಾಬರಿಯಾದರು ಕವಿ
ದಿಟ್ಟಸಿ ನೋಡಿದರು
“ಏನು ನೀವು ಹೇಳೋದು!
ಇದು ಕವಿತೆಗೆ ಸೇರೋದು
ಏನೋ ನೋಡಿ ಭೂತ ಅಂತ
ಗಾಬರಿಗೊಂಡಿಲ್ಲ ತಾನೆ ?
ಫ್ಯಾಂಟಸಿ ಕಥೆ ಏನನ್ನೋ ಬರೆಯುವ ಪ್ಲಾನಿಲ್ಲ ತಾನೆ ?
ಪಿತ್ಥ ಗಿತ್ಥ ಇದ್ದೀತು
ಜ್ವರದ ಸನ್ನಿ ಇದ್ದೀತು
ಬೇಗ ತಾಪ ಆರೀತು ಹೆದರಬೇಡಿ” ಎಂದರು
ಕೈಯ ಮುಟ್ಟಿ ಹಣೆಯ ಮುಟ್ಟಿ
ಖಾತ್ರಿ ಮಾಡಿಕೊಂಡರು
ಶಂಕೆ, ಆತಂಕ ಅವರ ಕಣ್ಣಿನಲ್ಲಿ ಹೊಳೆಯುತ್ತಿತ್ತು
ಕವಿತೆ ಬರೆದ ಅಭಯಹಸ್ತ
ನನ್ನ ಬೆನ್ನ ಸವರುತ್ತಿತ್ತು.
“ನಿಮ್ಮ ಆಣೆ, ನನ್ನ ಆಣೆ ಕವಿತೆಯಾಣೆ” ಎಂದೆ.
“ಮಕ್ಕೀ ಕಾ ಮಕ್ಕಿ ಘಟನೆ ನುಡಿದೆ ನಿಮ್ಮ ಮುಂದೆ
ನಿಜವಾಗಿಯೂ ಭೂತ ಇದೆ,
ನಾನೇ ಖುದ್ದು ನೋಡಿರುವೆ,
ರೂಬು ರೂಬು ಕೂತು ಎಷ್ಟೋ ಮಾತನ್ನಾಡಿರುವೆ
ಕಾಳರಾತ್ರಿ ಗಾಳಿಯೇರಿ ಭಗ್ಗನೆ ನುಗ್ಗುತ್ತದೆ
ನೀವು ಕೂತ ಕುರ್ಚಿಯಲ್ಲಿ ಧಿಮ್ಮನೆ ಕೂರುತ್ತದೆ
ಭಾಷೆ, ತರ್ಕ, ಮುಂಡೇದಕ್ಕೆ ಕಾವ್ಯ ಕೂಡ ಗೊತ್ತಿದೆ
ಕಂಡ ದಿವಸದಿಂದ ನನ್ನ ನೆಮ್ಮದಿಯೇ ಸತ್ತಿದೆ”
“ಹೇಗಿದೆ ?” ಎಂದರು ಕವಿ.
“ಅದೆ ವಿಚಿತ್ರ ನೋಡಿ
ನನ್ನನೆ ಕಡೆದಿಟ್ಟಂತಿದೆ ಎಲ್ಲ ಅಳತೆ ಮಾಡಿ.
ದೇಹವಷ್ಟೇ ಅಲ್ಲ,
ನಿಲುವು ಮಾತು ಧಾಟಿಯನ್ನೂ ಕದ್ದಂತಿದೆ ಕಳ್ಳ.
ಮನಸಿನಾಳದಲ್ಲಿ ಮಿಂಚಿ ತಳಕಿಳಿದದ್ದನ್ನೂ
ಗಾಳ ಹಾಕಿ ಎತ್ತುತ್ತದೆ
ಉರಿ ಉರಿಯುವ ಕಣ್ಣು!”
ಇರಲಿ ಬಿಡಿ, ಚಿಂತೆ ಬೇಡ
ಸ್ವಲ್ಪ ದಿವಸ ಬಿಡೋಣ,
ಕೆಟ್ಟದ್ದವಂತೂ ಇರಲಾರದು
ಅದರ ಆಟ ನೋಡೋಣ.
ಮೈ ಮುಟ್ಟುವುದಿಲ್ಲವಲ್ಲ ಬೇರೇನೇ ಆದರೂ
ಬರುತ್ತೇನೆ ಮತ್ತೆ ಎಂದು
ನಾಡಿಗ ಮೇಲೆದ್ದರು.
*****