ಮುಗಿದು ಹೋಯಿತೆಲ್ಲೋ ಲೋಕೇಶಿ
ನಿನ್ನ ಕಥೆ
ನೆಗದು ಬಿತ್ತಲ್ಲೋ ಕೋಟೆ
ಹುಡುಗನೊಬ್ಬ ಸೇದಿ ಬಿಸಾಡಿದ ಬೀಡಿಯ ಬೆಂಕಿಗೆ
ಧಗಧಗಿಸಿ ಹೋಯಿತಲ್ಲೋ ನಿನ್ನ ಸುವರ್ಣಲಂಕೆ !
ಆನೆ ಅಂಬಾರಿ ಛತ್ರ ಆಂತಃಪುರ ಎಲ್ಲ
ಮಣ್ಣು ಮುಕ್ಕಿ ಹೋಯಿತಲ್ಲೋ ಮಂಕೆ!
ಹಾಯ್ ಬೆಂಗಳೂರೇ, ಹಾಯ್ ಬೆಂಗಳೂರೇ
ಏನು ಸೇರಿದ್ದಾರೆ ಜನ ಜಂಗೀಕುಸ್ತಿಗೆ!
ಬೆರಗಾಗಿದ್ದಾರೆ ಎಲ್ಲ, ಹುಡುಗ ಹಾಕುವ ಪಟ್ಟಿಗೆ
ಹೇಳುತ್ತಾನೆ ಅವರಲ್ಲೊಬ್ಬ:
ಭಲೆ, ಹೇಗೆ ಹೂಡೆದ ಒಂದೇ ಏಟಿಗ ಅಬ್ಬ!
ಕೈ ಹಿಡಿದರೆ ಕತ್ತು ಹಿಡಿದ
ಕಾಲೆಳಿದರೆ ಸೊಂಟ ಮುರಿದ
‘ಏ ಕುರುಡ, ಏ ಕುರುಡ’ ಎಂದು ಎಳೆದಾಡುತ್ತ
ಬಿಸಿ ಬಾಣಲಿಗೆ ಹಾಕಿ ಹುಳ ಎಂಬಂತೆ ಹುರಿದ.
ಒಂದು ವಿಕೆಟ್ಟೂ ತೆಗೆಯದೆ ನೂರು ರನ್ನಿನ ಸೋಲು!
ದೇವರೇ
ಹೀಗೆ ಹೊಡೆಸಿಕೊಳ್ಳುವ ಬದಲು
ಲೋಟಾ ನೀರಲ್ಲಿ ಹಾರಿ
ಆತ್ಮಹತ್ಯೆ ಮಾಡಿಕೊಳ್ಳುವುದು ಮೇಲು!
ಹಿಂದೆ ಹೇಗಿತ್ತಲ್ಲೊ ಲೋಕೇಶಿ
ನಿನ್ನ ಪದಶಕ್ತಿ, ಸಿದ್ಧಿ!
ಯಾಕಾಯಿತೊ ಅದೀಗ ಹೀಗೆ
ಮುದಿಕತ್ತೆಯ ಲದ್ದಿ ?
ಹೇಗಿದ್ದವನು ಹೇಗಾದೆ,
ಏ ಕುದುರೆ! ಯಾಕೆ ಇಂಥ ಕತ್ತೆಯಾದೆ?
ಕಣ್ಣು ಕಾಣದಿದ್ದರೆ ಹೋಗಲಿ
ಬೇಡವೆ ಬುದ್ಧಿ,
ಯಾಕಾದರೂ ಸುಮ್ಮನಿರದೆ ಸವಾಲು ಕೊಟ್ಟೆ
ಯಾಕಾದರೂ ಹುಲಿಬಾಯಲ್ಲಿ ತಲೆ ಇಟ್ಟೆ?
ಪಾಪ!
ಎಂಥ ನಿನಗೆ ಎಂಥ ಗತಿ!
ಅಲ್ಲ ಸಲ್ಲದವರ ಮೇಲೆಲ್ಲ
ಸುಳ್ಳೇ ಬಗುಳಿದ್ದ ಕೇಡಿಗೆ
ಈಗ ಎಂಜಲ ಹೊಂಡದಲ್ಲಿ
ಪಬ್ಲಿಕ್ಕಾಗಿ ತಿಥಿ.
ತೊಡೆ ಹೊಟ್ಟೆ ಕೆನ್ನೆ ದವಡೆ ಅಂತ
ಹಾಗೆ ಮುಟ್ಟಿ ಮುಟ್ಟಿ ನೋಡಿಕೊಳ್ಳಬೇಡ ಗಾಯ!
ನೋಡುತ್ತಿದ್ದಾರೆ
ಲಕ್ಷ ಲಕ್ಷ ಜನ
ಚಪ್ಪಾಳೆ ಹಾಕಿ
ನಗದೆ ಇರುತ್ತಾರೆಯೇ ಮಾರಾಯ!
*****