ಯಾವ ಶುಭಗಳಿಗೆಯಲಿ
ಪ್ರಕೃತಿ ತಾನುದೆಯಿಸಿತೊ
ಆವ ಶುಭ ವೇಳೆಯಲಿ
ಜೀವ ಕಣ್ ತೆರೆಯಿತೊ
ಅಮೃತ ಸೆಲೆ ನೆಲೆಯಂತೋ ದಯವಲೀಲೆ ||ಪ||
ಶುಭೋದಯದ ಹಗಲಿರುಳಿನಲಿ
ನವೋದಯದ ಬಾಳ ಬೆಳಕು
ಬೆಸುಗೆ ವಸುಗೆಯಲೆಂತೋ ಸಗ್ಗ ಸುಭಗ ||ಅ.ಪ||
ಈ ಮಣ್ಣು ಕಣ ಕಣದಿ
ಹರಿವ ತೊರೆ ನದನದಿ ರವದಿ
ಅಲೆಯಲೆಯ ಅನಿಲದಲಿ ದೇವ ನೋಟ
ಚಿಗುರು ತಂಬೆಲರಲ್ಲಿ
ಸುಮ ಚೆಲ್ವರಿದ ಸಿರಿಯಲ್ಲಿ
ಕಣ್ಣ ಕಾಂತಿಗೆ ನಿತ್ಯ ಹಬ್ಬದೂಟ
ಅಂಗಲಂಗುಲದಲ್ಲಿ
ಬಾಂದಳದ ಬಿನ್ನಾಣ
ಕುಣಿ-ಕುಣಿವ ಮನಗಳಲಿ ಹರಿಣಿ ಬಿಂಬ
ಏರು ಜವ್ವನದಲ್ಲಿ
ಶೃಂಗಾರದಂದಣದಿ
ತನ್ನ ತಾ ಮರೆವಂಥೆ ಷೋಡಷ ಬಿಂಬ
ನೆಲ ಮುಗಿಲ ಹರಹಿನಲಿ
ಬಾಳ್ಬಳ್ಳಿ ಹರಡಿರಲು
ಅಂಕು ಡೊಂಕಿನ ಹಾದಿ ಮುಳ್ಳ ಭೀತಿ ಏಕೆ
ತೆರೆದ ಗಣ್ಣಿನ ಮನಕೆ
ನೊರೆಯ ಹಾಲಿನ ಗುಣಕೆ
ಹೆಪ್ಪುಗಟ್ಟಿಸಿದರೂ ನವನೀತವಾಗೋ ಚಣಕೆ.
*****