ಬಾಽ……. ಬಾಽ……. ಬೆಳಕೆ……. ಬಾಽ
ಮನೆಯ ಬೆಳಗು ಬಾ, ಮನವ ತೊಳೆಯು ಬಾ
ಜ್ಞಾನದ ಹೊಂಬೆಳಕೆ,
ಧ್ಯಾನದ ಸಿರಿಬೆಳಕೆ ಬಾಽ….. ಬಾಽ ||
ಮೂಡಲ ಸಂಸ್ಕೃತಿ ಹಿಮಗಿರಿ ಸಾಲಲಿ,
ಸಾಮಗಾನವನು ನುಡಿಸುತ ಬಾ
ಪಡುವಲದುತ್ಕೃತಿ ನೀಲಧಿ ಮಿಂಚಲಿ
ರಜನಿ ತಾರಾ ತೋಟವ ಸುತ್ತುತ ಬಾ ||
ನನ್ನೊಳು ನೀನಾಗಿ, ನಿನ್ನೊಳು ನಾನಾಗಿ
ಒಳಗಿನೊಳಗುಳ ಪಲ್ಲವಿಸಲು ಬಾ
ವಿಭೇದ ಭೇದದ ಮನ ಸರಿಸುತ ದೂರಕೆ
ವಸುದೈವ ಕುಟುಂಬವೆನ್ನಲು ಬಾ ||
ರಸಿಕ ರಸಾಂಬುಧಿ ರಸ ಸರಸಿಜೆ ಶಾರದೆ
ಅನುರಾಗ ವೀಣೆಯ ರಾಗಿಸು ಬಾ
ಹಗೆಯ ತಿಮಿರತನ ದೂಡುತ ದೂರಕೆ
ದಿನಕರ ಗಿರಿಯನು ತೋರಿಸು ಬಾ ||
ಮನಸಿಜನಾಭನ ಮಾನಸದಾಲಯ
ಮತಿ ಸನ್ಮತಿಯನು ಕರುಣಿಸು ಬಾ
ಮಾರಣ ಹೋಮದ ಬಲಿ ಪೀಠವ ಕೀಳಿಸಿ
ಸ್ಮುರ ಸುಂದರ ಸತ್ಯವ ಸ್ಥಾಪಿಸು ಬಾ ||
*****