(ರಗಳೆಯ ಪ್ರಭೇದ)
ಬರಲಿದೆ! ಅಹಹಾ! ದೂರದಿ ಬರಲಿದೆ-
ಬುಸುಗುಟ್ಟುವ ಪಾತಾಳದ ಹಾವೊ? |
ಹಸಿವಿನ ಭೂತವು ಕೂಯುವ ಕೂವೊ? ||
ಹೊಸತಿದು ಕಾಲನ ಕೋಣನ -ಓವೊ! |
ಉಸಿರಿನ ಸುಯ್ಯೋ? – ಸೂಸೂಕರಿಸುತ,
ಬರುವುದು! ಬರಬರ ಭರದಲಿ ಬರುವುದು- ||೧||
ಬೊಬ್ಬೆಯ ಹಬ್ಬಿಸಿ, ಒಂದೇ ಬಾರಿಗೆ |
ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ, ||
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ, |
ಅಬ್ಬರದಲಿ ಭೋರ್ ಭೋರೆನೆ ಗುಮ್ಮಿಸಿ,
ಬರುತದೆ! ಮೈತೋರದೆ ಬರುತದೆ! ಅದೆ- ||೨||
ನಡುಮುರಿಯುತ ನಗನಾವೆಗೆ, ಕೂವೆಗೆ |
ಉಡಿಸಿದ ಹಾಯಿಯ ಹರಿಯುತ ಬಿರಿಯುತ, ||
ಹಡಗನು ಕೀಲಿಸಿ, ತುಮುರನು ತೇಲಿಸಿ, |
ದಡದಲಿ ಝಾಡಿಸಿ, ದೋಣಿಯನಾಡಿಸಿ,
ಇದೆ! ಇದೆ! ಬರುತಿದೆ! ಇದೆ! ಇದೆ! ಬರುತಿದೆ – ||೩||
ಹಕ್ಕಿಯ ಕಣ್ಣಿಗೆ ಧೂಳಿನ ಕಾಡಿಗೆ |
ಇಕ್ಕುತ, ಹೊಲದೆತ್ತಿಗೆ ದನಕಾಡಿಗೆ ||
ಫಕ್ಕನೆ ಹಟ್ಟಿಗೆ ಅಟ್ಟಿಸಿ, ಕಾಡಿಗೆ |
ಸಿಕ್ಕಿದ ಕಿಚ್ಚನು ಊದಲು ಹಾರುತ,
ಬರುತಿದೆ! ಇದೆ! ಇದೆ! ಇದೆ! ಇದೆ! ಬರುತಿದೆ- ||೪||
ಸಡಲಿಸಿ ಮಡದಿಯರುಡಿಯನು ಮುಡಿಯನು,
ಬಡಮುದುಕರ ಕೊಡೆಗರಿ ಹರಿದಾಡಿಸಿ,
ಹುಡುಗರ ತಲೆ ತಲೆ ಟೊಪ್ಪಿಯ ಆಟವ
ದಡಬಡನಾಡಿಸಿ ಮನೆಮನೆತೋಟವ
ಅಡಿಮೇಲಾಗಿಸಿ, ತೆಂಗನು ಲಾಗಿಸಿ,
ಅಡಿಕೆಯ ಬಾಗಿಸಿ, ಪನೆ ಇಬ್ಭಾಗಿಸಿ,
ಬುಡದೂಟಾಡಿಸಿ, ತಲೆ ತಾಟಾಡಿಸಿ,
ಗುಡಿಸಲ ಮಾಡನು ಹುಲುಹುಲುಮಾಡಿಸಿ,
ಬಂತೈ! ಬಂತೈ! ಇದೆ! ಇದೆ! ಬಂತೈ!- ||೫||
ಗಿಡಗಿಡದಿಂ-ಚೆಲು ಗೊಂಚಲು ಮಿಂಚಲು-
ಮಿಡಿಯನು ಹಣ್ಣನ್ನು ಉದುರಿಸಿ ಕೆದರಿಸಿ
ಎಡದಲಿ ಬಲದಲಿ ಕೆಲದಲಿ ನೆಲದಲಿ,
ಪಡುವಣ ಮೋಡವ ಬೆಟ್ಟಕೆ ಗಟ್ಟಕೆ
ಹೊಡೆದಟ್ಟುತ, ಕೋಲ್ ಮಿಂಚನು ಮಿರುಗಿಸಿ,
ಗುಡುಗನು ಗುಡುಗಿಸಿ, ನೆಲವನು ನಡುಗಿಸಿ,
ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ,
ಜಡಿಮಳೆ ಸುರಿವೋಲ್, ಬಿರುಮಳೆ ಬರುವೋಲ್,
ಕುಡಿ ನೀರನು ಒಣಗಿದ ನೆಲಕೆರೆವೋಲ್.
ಬಂತೈ ಬೀಸುತ! ಬೀಸುತ ಬಂತೈ!
ತೆಂಕಣ ಗಾಳಿಯು ಕೊಂಕಣ ಸೀಮೆಗೆ
ಬಂತೈ! ಬಂತೈ! ಬಂತೈ! ಬಂತೈ! ||೬||
*****
(ಪದ್ಯ ಪುಸ್ತಕ)