ಕೆಂಪು ವಜ್ರ ನೀಲ ಪುಷ್ಯ
ರಾಗ ವೈಡೂರ್ಯವು
ಚಂಪರಾಗ ಚಂದ್ರಕಾಂತ
ನಾಗ ಗೋಮೇಧಿಕ
ಇಂತು ನೋಡಿ ಒಡೆದು ಕಡೆದು
ತಿಕ್ಕಿ ನಾಸಿಕ್ಕಿದೆ
ಚಿಂತೆಯಲ್ಲಿ ಸಾಣೆಯಿಟ್ಟು
ಮಿಕ್ಕುವನ್ನಿಕ್ಕಿದೆ
ಇಡಲು ಕಳಸ ಗೋಪುರಾದಿ
ರತುನ ಮಂದಿರಕೆನೆ
ನುಡಿಯ ಗಣಿಗಳಿಂದ ತೆಗೆದೆ
ರತುನ ಗಲ್ಲೆಂಬಿವ
ಹೂಡಿ ನೋಡಿ ತೋರಣಾದಿ
ಅಕ್ಷರಾಲಯಕನೆ
ಜೋಡಿಸಿಹೆನು ರೂಢಿಯೊಳಗೆ
ಅಕ್ಷರಾಲಯವಿದ
ಕಣ್ಣಿವೆಂದು ಉಣ್ಣದಂಥ
ರೂಪ ಸೌಂದಯ್ಯವು!
ಅಣ್ಣ ಕೇಳು ಚಲ್ವರೂಹ
ರೂಪ ರಾಗಾದಿಯು
ದ್ವಾರ ತೋರಣಾದಿಯಿಲ್ಲಿ
ಬಿಜಯಿಸೈ! ಅತಿಧಿಯೆ!
ದ್ವಾರ ದರ್ಪಣಾದಿಯಲ್ಲಿ
ಬಿಜಯಿಸೈ ಪಧಿಕನೆ
ಸಾಗಿ ಮುಂದೆ ನೀಡುಅಲ್ಲಿ
ಅತ್ತಲಲ್ಲಿ ಕರಗಳ!
ರಾಗಿಣಿಯರು ಬಂದರಲ್ಲಿ
ಮತ್ತಕಾಶಿನಿಯರು!
ಇಲ್ಲಿ ಸಾಲಗೊಂಬೆ ನೋಡು
ನೋಡು ಕೈಸಾಲೆಯ!
ಇಲ್ಲಿ ಏರುಗಲ್ಲ ರಾಜಿ
ನೋಡು ವೈಭೋಗವ!
ಭೋಗ ಸಾಧ್ಯ ಸ್ವಪ್ನ ಸುಧೆಯ
ದೆಂದೆಯಾ ಈ ದಿನ
ಯೋಗ ಸಾಧ್ಯವೆಂಬ ರೂಪಿ
ವೆಂದೆಯಾ! ಈ ದಿನ!
ಏಳುನೆಲೆಯ ಶಿರಿಯನಲ್ಲಿ
ಶೀಲನೀ ಕಂಡೆಯ
ಭಾಳವುಂಡು ದಣಿದೆನೆಂದು
ಲೋಲನೀನೆಂದೆಯ!
ಇಷ್ಟು ರೂಪು ನೋಡಿ ದಿಟ್ಟಿ
ನೊಂದುದೇ ನೆಂಬೆಯ
ಇಷ್ಟ ದೈವ! ಕಾಣಲಿಲ್ಲ!
ವೆಂದಿತೇ ಹೃದಯವು!
ಕಾಣಲಿಲ್ಲ ಕಾಂತೆಯನ್ನು
ಕಾಂತೆಯೆಲ್ಲೆಂದಿತೆ?
ಜಾಣ ತಿರುಗು ವಳಗೆ ನೋಡು
ಕ್ಲಾಂತ! ನೀ ಮುಂಗಡೆ.
ಬಿಗಿದು ಆಶೆ ಬಿಗಿದು ಊಹೆ
ಮುಗುದ! ಮೆಲ್ಲನಡಿಯಿಡು
ಮುಗಿಲಿನಂತೆ ತೆರೆಯ ಕಡೆಗೆ
ಮುಗುದ! ಮೆಲ್ಲನಡಿಯಿಡು.
ಏಳು ಹೊಸಿಲ ದಾಟ ಬೇಕು
ಏಳು ತರೆಯ ಹಾರಿಸಿ
ಏಳು ವರಣ ಜೋತಿ ರಾಜಿ
ಏಳ ನೀ ದಾಟುವೆ.
ತೆರೆಯ ಶೆಳೆದು ನೋಡು ವಳಗೆ
ಇರುವ ಮೂರ್ತಿ ಯಾವುದು?
ಶಿರಿನಿಕೇತನಕ್ಕೆ ಈಕೆ
ಅರಿಯೆ ನೀ ರಾಣಿಯು!
ಬಲ್ಲೆ ಬಲೆ! ನೀನು ಇವಳ
ಬಲ್ಲೆಯೈಯ್ಯ! ಅತಿಥಿಯೆ!
ಚಲ್ಪ ರೂಹ ತೇಜದಲ್ಲಿ
ಎಲ್ಲೋ ನೀ ಮಿಂದಿಹೆ.
ಇದುವೆ ಪದುಮವನ್ನು ಹುಡಕಿ
ಭ್ರಮರ ಕೋರಿಕೆಗಳು
ಚದುರ! ತಿರುಗಿ ಯೇಳು ಲೋಕ
ಅಮಮ! ಹಿಂದಿರುಗಿವೆ.
ಹೃದಯ ರಮೆಯನದಯಳೆಂದು
ವಿರಹಿ ನೀ ನೊಂದೆಯ?
ಚದುರೆಯನ್ನು ವಿರಹ ಮನವು
ಅರಸಿ ಕಾಣದಿದ್ದಿತೇ?
ನೀನು ಕಂಡು ಭ್ರಮಿಸಿ ಪೋದ
ನಾಳೆಯೆಂಬಾದಿನ
ರಾಣಿ! ನಿನ್ನ ಧ್ಯಾನದಲ್ಲಿ
ಭಾಳ ಮೈಮರೆತಿರೆ
ಚಂಡಬಲರು ದೈತ್ಯ ಸುತರು
ದೂರ ನೀರವರಿರೆ!
ಕಂಡು ಶೆಳೆದು ವೊಯ್ದರವಳ
ನೀರು ಯೇಳ ರಾಚೆಗೆ!
ರಸಿಕ ! ನಿನ್ನ ನೆನಹಿನಲ್ಲಿ
ಕನಲುತಿರ್ದೀಕೆಯ
ಸಸಿಯ ಮೊಗವ ಕಂಡೆನೊಮ್ಮ
ಕನಸ ಸಂಚರಿಯಲಿ.
ಕಮಲ ನಾಳ ದೊಳಗೆ ಯಿಳಿದು
ಕಂಡೆ ನಾ ಶರೆಮನೆ.
ರಮಣಿ ಇವಳ ಬಿಡಿಸಿ ತಂದೆ
ಪುಂಡರಂ ಖಂಡ್ರಿಸಿ.
ನುಡಿಯ ಲಲಿತ ಗೃಹವ ಕಟ್ಟಿ
ಕುವರಿಯನ್ನಿಟ್ಟೆನು,
ಒಡನೆ ಛಲವ ಹಿಡಿದವಳವಳು
ಅವನ ತೋರೆನುತಲಿ!
ರತುನ ದ್ವಾರ ಮುಚ್ಚದಿಹುದು
ಸತತ ರಾಗಿಣಿಯರು
ಪಧಿಕ! ರಸಿಕ! ಬರುವನೆಂದು
ಸತತ ಕಾದಿರುವರು!
*****