ಅಂಥಿಂಥವನಲ್ಲ ರಾಮನಾಥ
ಕಾರ್ಬನ್ ಕಾಪಿ ವರದಿಗಾರ,
ಎಂಥೆಂಥವರನ್ನೋ ನುಂಗಿ ನೀರು ಕುಡಿದವನು
ಒಂದರ್ಥದಲ್ಲಿ ಕ್ರಾಂತಿಕಾರ.
ಅಸಾಧ್ಯ ಸತ್ಯವಂತ ರಾಮನಾಥ
ನಾ ಹೇಳಿದ್ದನ್ನೇ ಕಕ್ಕಿದ,
ಪದ ಅಳಿಸದೆ ಪದ ಬಳಸದೆ
ಹೊಸಾ ಹೊಸಾ ಅರ್ಥ ಬೆಳೆದ.
ಮಹಾಬುದ್ಧಿವಂತ ರಾಮನಾಥ
ವಿರಾಮ ಚಿಹ್ನೆ ಮಾತ್ರ ತೆಗೆದ,
ಕಾಮ ಇದ್ದಲ್ಲಿ ಫುಲ್‌ಸ್ಟಾಪ್ ಇಟ್ಟು
ಸೆಮಿಕೋಲನ್ನಷ್ಟೆ ನುಂಗಿದ.
ಒಂದು ಪದವನ್ನು ನಕ್ಕು ಉಚ್ಚರಿಸಿ
ಮತ್ತೊಂದನ್ನು ಬಿಕ್ಕಿದ,
ಪದಗಳ ಮಧ್ಯೆ ಅಂತರ ಹೆಚ್ಚಿಸಿ
ಬೆಂತರಗಳನ್ನೆ ಇರುಕಿದ.
ರಾಮನಾಥ ಬಹಳ ಹಸ್ತಕುಶಲಿ
ದೊಡ್ಡ ಪವಾಡಗಾರ,
ಬೀಗ ಮುಟ್ಟದೆ ಬಾಗಿಲು ಒಡೆಯದೆ
ಭಾರಿ ಕಳುವನ್ನೆ ಮಾಡಿದ.
ಕಿವಿ ಕಣ್ಣು ನಾಲಿಗೆ ಎಲ್ಲವೂ ಇರುತ್ತೆ
ಉಸಿರೇ ಪರಾರಿಯಾಯಿತು.
ಮುಟ್ಟಿದ್ದೇ ತಡೆ ರಾಮನಾಥ
ಸತ್ತೇ ಎಂದಿತು ಮಾತು.
*****