ದಟ್ಟ ಮೆಳೆಯ ಬದುವಿನಲಿ
ಅಂಡಲೆಯುತ್ತಿದ್ದ ಗೆಳತಿಗೆ
ಎಲ್ಲೋ ಮರದ ತುದಿಯಲಿ
ಪಕ್ಕನೆ ಕೈಸಿಕ್ಕ ಕೆಂಪು ಹಸುರಿನ
ಬೋರಂಗಿ ಸಾಹಸದಿಂದ
ಹಿಡಿದು ತಂದ ಮದರಂಗಿ.
ಅದು ಪುರ್ರನೆ ಹಾರಿ ಮೈಯಲ್ಲಾ
ರೋಮಾಂಚನ ಪುಟ್ಟ ಅಂಗೈತುಂಬ
ಚೆಲುವಿನ ಚಿತ್ತಾರ ಸಾವಿರ ಸೂರ್ಯ
ಹೊಳೆಯುವ ಬೆಳಕು ಕಾಡಿಗೆ ಕಣ್ಣ ತುಂಬ
ಪುಟ್ಟ ಕೈಗಳು ಅಲ್ಲಾವುದ್ದೀನ್ ಅದ್ಭುತ ದೀಪ.
ಮರದ ಮೇಲಿನ ಹಾರಾಟ ಬೋರಾಟ
ಬೆಂಕಿ ಪೊಟ್ಟಣದ ತುಂಬಾ ಚೂರು
ಎಲೆ ಹಸಿರು ಬಳಿ ಹಿಟ್ಟು ಪುಡಿ
ಜೊತೆಯಲ್ಲೇ ಮಲಗಿದ್ದ ಬಣ್ಣದ ಹುಳ
ಹರಡಿದ ಕನಸುಗಳು ತುಂಬ ರಂಗು
ಹೊಸ ಕವಿತೆಗಳು ಹುಟ್ಟಿದ ಮನಸ್ಸಿನ ಗುಂಗು.
ದೇವರ ಮುಂದೆ ಹುಟ್ಟಿದ ಹಾಡು
ಎದೆಯಿಂದ ಎದೆಗೆ ಹರಿದ ಪಾಡು
‘ನಿನ್ನ ನೆನಪಿಗೆ ಕೊಟ್ಟು ಬಿಡು ಇನ್ನೇನು
ಬೇಡುವದಿಲ್ಲ, ಚಿಗಳಿ ಕುಟ್ಟಿಕೊಡಲು
ಮನೆಯಲಿ ಖಾಲಿ ಪಾತ್ರೆಗಳ ಸುಗ್ಗಿ
ಬರೆದು ಕೊಡುವೆ ಮೂವತ್ತರ ತನಕ ಮಗ್ಗಿ’
ಕೊಟ್ಟು ಕೂಡುವ ಇರಾದ ಲೆಕ್ಕ
ಗೆಳತಿ ಇಟ್ಟಳು ಮಟ್ಟಸ
ಹುಡುಕುವಾಗ ಹಬ್ಬಿದ ದಾವಂತ
ಎಣಿಕೆಗೆ ಸಿಗವೇ ಜಾರಿದ ಅಂತ
ಎಲ್ಲೋ ಬಸಿವ ನೆನಪಿಗೆ ಇಲ್ಲಿ
ಕುಸಿಯುವ ಆತ್ಮ ನಿಂದನೆ ಕನ್ನಡಿ
ಇಂದಿಗೂ ಇಡಲಿಲ್ಲ ಖಾಲಿ ಪೊಟ್ಟಣದಲಿ ಬೋರಂಗಿ
ಖಾಲಿ ಮನೆ ರೋಧಿಸುತ್ತಿದೆ
ತಣ್ಣೆಯ ಗಾಳಿ ಮೊಳಕೆ ಒಡೆಯದ
ದಿನದಲಿ ಸೂರ್ಯನ ಪಣತಿ ಹಚ್ಚಿ
ನಿನ್ನ ನಿರೀಕ್ಷೆಯಲಿ ಕಾದಿರುವೆ ಇನ್ನಾದರೂ
ಒಮ್ಮೆ ಬಂದು ಬಿಡು ಈ
ಖಾಲಿ ಎದೆಯ ಪದದೊಳಗೆ
ಬೇಸಿಗೆಯ ಬಿರು ಬಿಸಿಲಿನ ಹಗಲೊಳಗೆ.
*****