ಇಲ್ಲಿ ಬಯಸಿದಂತೆ
ಬದುಕಬಹುದು
ಇಚ್ಛೆಯಂತೆ ಸಾಯಬಹುದು
ಸುತ್ತಲೂ ಮರಗಳು
ಮರದೊಳಗೆ ಕಿಕ್ಕಿರಿದು
ಪರಿಮಳಿಸಿವೆ ಹೂವುಗಳು
ಜಿಂಕೆ ಆನೆ ಹುಲಿಗಳು
ನೋಡಿಯೂ ನೋಡದಂತೆ
ತಮ್ಮ ಪಾಡಿಗೆ ತಾವು
ಹೆಜ್ಜೆಗಳನೂರಿ ಸಾಗಿಹವು
ಹಕ್ಕಿಗಳು ಆಗಾಗ್ಗೆ ಹಾಡಿ
ಗಮನ ಸೆಳೆಯುವವು
ನವಿಲು ನನಗೆಂದೇ
ಗರಿಯೊಂದನು ಉದುರಿಸಿಹುದು
ತಂಗಾಳಿ ಸುಳಿಸುಳಿದು
ಚಿಂತೆಗಳನೆತ್ತಿ ಕೊಂಡೊಯ್ಯುವುದು
ಮಲಗು ಮಲಗೆಂದು
ಮೆಲ್ಲನೆ ಪಿಸು ನುಡಿಯಾಡುವುದು
ಹೊಯ್!
ಕಷ್ಟಗಳೇ ಕಾಡು ಸುತ್ತಲು ಹೋಗಿ
ಕ್ಲೇಶಗಳೇ ಎಲೆಗಳನೆಣಿಸಲು ಶುರು ಮಾಡಿ….
ಅಲ್ಲ…. ಎಲ್ಲಾದರೂ
ಕಾಡು ಸುತ್ತಿ ಮರಳುವುದುಂಟೆ?
ಹೋಗಲಿ….
ಎಲೆಗಳನೆಣಿಸಿ ಮುಗಿಸಿದವರುಂಟೆ?
ಈಗ ಇಲ್ಲಿ
ಬಯಸಿದಂತೆ ಸಾಯಬಹುದು
ಇಚ್ಛೆಯಂತೆ ಬದುಕಬಹುದು
*****