ದೀಪವಾರಿಸಿದ ಕತ್ತಲೆ ಕೋಣೆಯಲಿ
ಕಣ್ಣಿಗೆ ಏನೂ ಕಾಣಿಸುವುದಿಲ್ಲ
ಬರೀ ನಿಟ್ಟುಸಿರು ಕೇಳುತ್ತದೆ.
ಮಲಿನಗೊಂಡ ರಾತ್ರಿ ಕಪ್ಪಿನಲಿ
ಹೂಗಳು ಅದ್ದಿ ಒದ್ದೆಯಾಗಿವೆ ಕಣ್ಣೀರಿನಲಿ
ಇಬ್ಬನಿ ಹನಿಗಳು ಮಾಯವಾಗಿವೆ.
ಕಣ್ಣಿನ ಕಾಡಿಗೆ ಕರಗಿ ಹೋಗಿಕೆನ್ನೆ
ತುಂಬ ವಿಷಾಧದ ಹನಿಗಳು
ಬಿಕ್ಕುಗಳು ಅಂಗಳದಲ್ಲಿ ನೀರು ತುಂಬಿವೆ.
ಬೆಳಕಿನ ದಾರಿ ಕ್ರಮಿಸಬೇಕಾಗಿದೆ
ಕಮರಿದ ಕನಸುಗಳ ಓಣಿ ಊರು ಕೇರಿ
ಹೊತ್ತಿಸಿಕೊಂಡ ನಿಶ್ಯಬ್ದ ರಾತ್ರಿ ಲಾಟೀನು ಹಿಡಿದು.
ನಿದ್ದೆಗಿಳಿದ ಅಚ್ಚರಿಯ ಮುಲುಕುಗಳು
ನದಿಯ ದಂಡೆ ಗುಂಟ ಹರಿದು ನಿನ್ನ
ಪಾದಗಳು ತೊಳೆಯಬೇಕಾಗಿದೆ ನನ್ನಾತ್ಮ ಪ್ರೀತಿಯಲಿ.
ಪ್ರೇಮ ಪರಿಗಣಿಸುತ್ತದೆ ಒಂದಲ್ಲ
ಒಂದು ದಿನ ಈ ಜಗದ ಚರಿತೆಯಲಿ.
*****