ದಿನಾ ಬರುವ ಪ್ಯಾಕೆಟ್ ಹಾಲಿನ
ವ್ಯಾನ್ ಈ ದಿನ ಓಣಿಯಲ್ಲಿ ಬಂದಿಲ್ಲ
ಎದುರು ಮನೆಯ ಬಾಡಿಗೆ ಹುಡುಗರ
ದಂಡು ಆಯಾ ಮಾಡುವ ಚಹಾಕ್ಕಾಗಿ
ಕಾದು ಕುಳಿತಿದ್ದಾರೆ. ಮೂಲೆ ಮನೆಯ
ಗೇಟಿಗೆ ಒರಗಿ ನಿಂತ ಅವ್ವಯಾಕೋ
ದಿಗಿಲಾಗಿದ್ದಾಳೆ ಉರಿವ ಒಲೆಯ ಒಳಗೆ ಹಾಗೇ ಬಿಟ್ಟು.
ಪೇಪರಿನ ಹುಡುಗ ಎಂದಿನಂತೆ
ಎಲ್ಲ ಬಾಗಿಲುಗಳಿಗೂ ಸುದ್ದಿ ಒಗೆದು
ಹೋಗಿದ್ದಾನೆ, ಹೂವಿನ ಹುಡುಗಿ ಬ್ರೆಡ್
ಮಾರುವ ಹುಡುಗ ತಮ್ಮಲ್ಲಿಯೇ ಮೆಲ್ಲಗೆ
ಮಾತನಾಡುತ್ತ ಉದ್ಯೋಗದ ಬೆಳಕು ಹೊತ್ತು
ತಂದಿದ್ದಾರೆ ರೆಕ್ಕೆ ಬಿಚ್ಚಿದ ಹಕ್ಕಿಗಳು ಹಾರಾಡಿ
ತೇಲುತ್ತ ಸಾಗಿವೆ ಕರ್ಮಯೋಗಕ್ಕೆ ಊದಿನ ಕಡ್ಡಿ
ಹಚ್ಚಿ ಫಡಕುಗಳ ತೆಗೆದ ಶೆಟ್ಟಿ
ಲೆಕ್ಕ ಹಾಕುವ ದಿನಗಳ ತೆರೆದಿದ್ದಾನೆ.
ಒಂದು ದಿನದ ಪಯಣ ಸಾಗಿದ ಅವರವರ
ಲೆಕ್ಕದಲಿ ಗಂಟೆಗಳು ಭಾರಿಸುತ್ತಲಿದೆ ಮತ್ತೆ
ಹಗಲಲ್ಲೂ ಉರಿಯುತ್ತದೆ ಬೀದಿ ದೀಪಗಳು.
ಬಿಳಿಗಡ್ಡದ ಮುದುಕರು ಕೆಮ್ಮುತ್ತ ಕುಳಿತಿದ್ದಾರೆ
ಚಹಾದಂಗಡಿಯ ಕಟ್ಟೇ ಮೇಲೆ ಬಿತ್ತಿದ್ದು ಬೆಳೆಯಾಗದ
ರೀತಿಗೆ ಬೆರಗಾಗಿ ಹೌಹಾರಿ.
ಮಕ್ಕಳು ಬಿಳಿ ಅಕ್ಷರವ ಗೀಚುತ್ತಲಿವೆ ಕರಿಪಾಠಿಯಲಿ,
ಅಡುಗೆ ಮನೆಯಿಂದ ಒಗ್ಗರಣೆ ವಾಸನೆ
ಹರಿದು ಬರದ ಹೊತ್ತಿನಲಿ, ಸುಕ್ಕಾಗಿವೆ
ಮುಖದ ನೆರಿಗೆಗಳು, ಮುಕ್ಕಾಗಿವೆ ಕೈ ಬಳೆಗಳು,
ಹಾದಿಯ ಮಣ್ಣಿನಲಿ ಮೂಡಿವೆ ಎಲ್ಲರ ಪಾದದಗುರುತು.
ಸೂರ್ಯ ಹೊತ್ತು ಸಾಗಿದ್ದಾನೆ ಬೆವರ ಹನಿಗಳ
ಭತ್ತದ ಗದ್ದೆಯಲಿ ತೇಲಿವೆ ಹಸಿರು ಚಿಟ್ಟೆಗಳು
ಸೀಮೆ ಎಣ್ಣೆಗಾಗಿ ನಿಂತ ಸಾಲಿನಲ್ಲಿ ಅಲ್ಪ ವಿರಾಮವಾಗಿ
ಕುಳಿತಿದ್ದಾಳೆ ಅಜ್ಜಿ ಮೊಮ್ಮಗನೊಂದಿಗೆ
ಸುಕ್ಕಾದ ಸೀರೆ ಉಟ್ಟ ನೀರೆಯರು ಸಾಗಿದ್ದಾರೆ
ಲೋಕಲ್ ಟ್ರೇನು ಬಸ್ಸು ಹಿಡಿದು ನೌಕರಿ ಎಂಬ
ಹುತ್ತದ ಒಳಗೆ ತುಂಬ ಇರುವೆ ಕಡಿಸಿಕೊಳ್ಳಲು.
ಹೋಟೆಲ್ಲುಗಳಲ್ಲಿ ದೋಸೆಗಳು ಗುಂಡಗಾಗಿವೆ
ಭೂಮಿಯ ಚಲನೆಯ ಗತಿಯಲಿ
ತಾಯಿ ಕಂದನ ಎದೆಗವಚಿಕೊಂಡು ಆಸ್ಪತ್ರೆಯ
ಮೆಟ್ಟಿಲು ಏರುತ್ತಿದ್ದಾಳೆ, ಪಿಕ್ಚರ್ ಫ್ರೆಮ್ನ ಶಾರ್ಟ ಅಂಗಲ
ವಿಸ್ತಾರ ಹರಡುತ್ತದೆ ಕೊನೆಯಲ್ಲಿ ನೀಲ ಆಕಾಶದ ಕ್ಯಾಮರಾ
ಕಣ್ಣುಗಳು.
*****