ಕಲಾವಿದನ ಕುಂಚ ಎಳೆದವು
ಕ್ಯಾನ್ವಾಸಿನ ತುಂಬ ಗೆರೆಗಳು
ಮೂಡಿತು ವಿಸ್ತಾರ ಬದುಕು
ಮನಸ್ಸಿನ ಸೌಂದರ್ಯ ಬಿಂಬ
ಕೃತಿಯಲಿ ಆಕೃತಿ ಅರಳಿದವು
ಒಳತೋಟಿಯ ಸರಳ ಸಂಕೀರ್ಣ
ಕಪ್ಪು ಬಣ್ಣಗಳು ಬಿಳಿ ಕಣ್ಣುಗಳು
ಗೆರೆಗಳು ಆದವು ರೇಖೆಗಳು
ಅಭಿವ್ಯಕ್ತಿಯ ನಾಟಕ ರಂಗತಾಲೀಮು
ಕೇಳಿದವು ಎದೆಮೀಟುವ ಹಾಡುಗಳು
ಮನುಕುಲದ ಪಾಡುಗಳು ಹರಿದ
ಭಾವ ಬಿಂದುಗಳು ನದಿಯಾಗಿ
ಒಡಲಸೇರಿದ ಬಣ್ಣಗಳಿಗೆ
ನೂರಾರು ಭಾಷೆಗಳು.
ಸರಳ ರೇಖೆಗಳೆಲ್ಲಾ ಒಂದನ್ನೊಂದು
ಕೂಡದೇ ಹಾಯ್ದು ಹರಿದಾಡಿ
ಇಳಿದು ಅದ್ದಿತೆಗೆದ ಓಕುಳಿಯಲಿ
ಅಗಾಧ ಮೌನ ಕವಿತೆಯ ರಾಗಗಳು
ಬಿಂದು ಬಿಂದು ಸೇರಿದ ಚಲನೆಗತಿ.
ದೀರ್ಘಸುಳ್ಳು ಖರೇ ಅನಿಸಿದ ಕ್ಷಣಗಳು.
ಸೂರ್ಯ ಬಳಿದ ಗಟ್ಟಿ ಬಣ್ಣದ ತಿರುಳು
ಜೀವಭಾವದ ಇಂಚು ಚೈತನ್ಯಗಳರಳಿ
ಹೂವು ಹಣ್ಣು ಹಕ್ಕಿ ಹಾಡು ಧರೆಯ ಕ್ಯಾನ್ವಾಸ್ ತುಂಬ
ಅವರಿವರು ಹಾಕಿದ ರೇಖೆಗಳು ಗೆರೆಗಳು
ಜೀವ ತುಂಬಿದ ಬೆಳಕ ಕಿರಣಗಳು
ಛಾಯೆಯ ಬಣ್ಣಗಳ ಲೋಕದಲಿ.
*****