ಕವಿಗೋಷ್ಠಿಯಲ್ಲಿ….

ಢಣಢಣ ಗಂಟೆ ಬಾರಿಸಿತು
ಎಲ್ಲರೂ ಸಾಲಾಗಿ ಕುಳಿತರು
ಬಣ್ಣ ಬಣ್ಣದ ಕವಿತೆಗಳು
ಒಂದೊಂದಾಗಿ ವೇದಿಕೆಗೆ ಬಂದವು.

ಕೆಲವು ಕವಿತೆಗಳು
ಹೂಗಳಂತೆ ಅರಳಿದರೆ
ಮತ್ತೆ ಕೆಲವು
ನದಿಗಳಂತೆ ಹರಿದವು.

ಕೆಲವು ಕವಿತೆಗಳು
ನಕ್ಷತ್ರಗಳಂತೆ ಮಿನುಗಿದರೆ
ಮತ್ತೆ ಕೆಲವು
ಉಲ್ಕೆಗಳಂತೆ ಉರಿದು
ಬೂದಿಯಾದವು.

ಕೆಲವು ಕವಿತೆಗಳು
ಕಲ್ಲುಸಕ್ಕರೆ ತಿನ್ನಿಸಿದರೆ
ಮತ್ತೆ ಕೆಲವು
ಕಷಾಯ ಕುಡಿಸಿದವು.

ಕೆಲವು ಕವಿತೆಗಳು
ಬೆಂಕಿ ಉಗುಳಿದರೆ
ಮತ್ತೆ ಕೆಲವು
ರಕ್ತ ಕಾರಿದವು.
ಕೆಲವು ಕವಿತೆಗಳು
ಬಿಕ್ಕಳಿಸಿ ಅತ್ತರೆ
ಮತ್ತೆ ಕೆಲವು
ಮುಕ್ಕಳಿಸಿ ನಕ್ಕವು

ಕೆಲವು ಕವಿತೆಗಳು
ತೊಂಡು ದನಗಳಂತೆ
ಕಂಡದ್ದನ್ನೆಲ್ಲ ಹೊಸಕಿಹಾಕಿದರೆ
ಮತ್ತೆ ಕೆಲವು ತಾಯಿಯಂತೆ
ಅವನ್ನೆತ್ತಿಕೊಂಡು ಸಂತೈಸಿದವು.

ಕೊನೆಗೆ ಬಂದದ್ದು
ಪ್ರೇಮಿಯಂತಹ ಕವಿತೆ
ನೆಲ ನೀರು ಆಕಾಶದಂತ ಕವಿತೆ
ಅದು ಕಡಲಿನ ಹಾಗೆ ಮೊರೆಯುತ್ತಿತ್ತು
ನೆಲದ ಹಾಗೆ ಪರಿಮಳಿಸುತ್ತಿತ್ತು.
ಅದು ಆಕಾಶದಂತೆ
ಎಲ್ಲವನ್ನೂ ತಬ್ಬಿಕೊಂಡು
ಮೈ ಮರೆಯಿತು, ಮೈ ಮರೆಸಿತು.

(ಕವಿಗೋಷ್ಠಿಯೊಂದರಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯನ್ನು ಕೇಳಿ)


Previous post ವಿನಯ
Next post ಜೀರುಂಡೆ ಸಾಲು

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…