ಭಾವನಾ ಪ್ರಪಂಚದೊಳಗೆ ತೇಲಿ ನಲಿವುದೇ ಸುಖ
ಕೋವಿದರನು ಕಮಡು ತಿಳಿದು ಸುಮ್ಮನಿರುವುದೇ ಸುಖ
ಬೇಕು ಎಂಬ ಮಾತು ಬಿಟ್ಟು ಬೇಡವೆಂಬುದೇ ಸುಖ
ಲೋಕದಾಟವೆಲ್ಲ ನೋಡಿ ನಗುತಲಿರುವುದೇ ಸುಖ
ಉತ್ತಮರೊಳು ಸೇರಿ ಕಾಲ ಕಳೆದುಕೊಂಬುದೇ ಸುಖ
ವಸ್ತುಗಳನು ಕಂಡು ತಣಿದು ದೂರ ಸರಿವುದೇ ಸುಖ
ಇತ್ತ ಬಾ ಎಂದು ಕರೆಯೆ ನಮಿಸಿ ನಡೆವುದೇ ಸುಖ
ತುಚ್ಛಜನರು ಇಡುವ ಬಾಧೆಗಂಜದಿರುವುದೇ ಸುಖ
ನಿರುತ ಕಾಂತಿಯಿಂದ ಮನವ ನಿಲಿಸಿಕೊಂಬುದೇ ಸುಖ
ಎಂತು ನನ್ನ ಗತಿಯು ಎಂಬ ಚಿಂತೆ ಬಿಡುವುದೇ ಸುಖ
ನಿಂತ ಎಡೆಯೆ ಸಗ್ಗವೆಂದು ಹರುಷಪಡುವುದೇ ಸುಖ
ಇಂತು ಪೇಳು ಜೀವನಿಗೆ, ಸಂತೆ ಇದುವೆ, ಜನಕಜೆ!
*****