ಎಂಥ ಮಾತುಗಳ ಹೇಳಿದೆ ಗುರುವೇ
ನಮಸ್ಕಾರ ನೂರು
ಇಂಥ ನೀತಿಗಳ ಹೇಳಬಲ್ಲವನು
ಕಬೀರನಲ್ಲದೆ ಯಾರು?
ಹಿಂದೂ ಮುಸ್ಲಿಮ ಗಂಧಗಳೆಲ್ಲಾ
ಮಣ್ಣಿನ ಶರೀರಕಷ್ಟೇ;
ಆತ್ಮಕೆ ಮತದ ಬಂಧನವೆಲ್ಲಿದೆ?
ಇರುವುದು ಸತ್ಯದ ನಿಷ್ಠೆ
ವೇದ ಖುರಾನು ಗ್ರಂಥಸಾಹಿಬ
ದಾರಿಯಿವೆ ಹಲವಾರು,
ಯಾವ ದಾರಿಯಲಿ ಯಾರೆ ಬಂದರೂ
ಸಿಗುವುದು ಒಂದೇ ಊರು
ಬಯಸಿದಂತೆ ಜಿಗಿದೋಡುವ ತೊರೆಗಳು
ನಡುವೆ ನದಿಯ ಸೇರಿ
ಬಂದು ಕೂಡುವುವು ಕಡಲನು ಕೊನೆಗೆ
ತಮ್ಮ ರೂಪ ಮೀರಿ
ಪಾತ್ರೆಯ ಆಕೃತಿ ಹೇಗೆ ಇರಲಿ
ಒಳಗಾಡುವ ಜಲ ಒಂದೇ,
ಜಾತಿ ಮತವೆಲ್ಲ ಹೊರಗಿನ ಭೇದ
ಎಂದನು ಕಬೀರ ಅಂದೇ.
*****