ಎಂದಿಗಾದೀತು ಈ ದೇಶ
ಎಲ್ಲರಂತೆ ತಾನೂ?
ಎಂದಿಗಾದೀತು ಇರದಂತೆ
ತರತಮ ಏನೇನೂ?
ಜನಮನಗಳ ನಡುವೆ-ಗೋಡೆ
ಎಂದಿಗೆ ಉರುಳುವುವು?
ಬಡವರ ಇರುಳುಗಳು-ಎಂದಿಗೆ
ಪೂರಾ ಕರಗುವುವು?
ಸೆರೆಯೊಳಿರುವ ಲಕ್ಷ್ಮಿ-ದೀನರ
ಕಡೆ ಹೊರಳುವಳೆಂದು?
ಗಾಳಿ ಬಿಸಿಲಿನಂತೆ – ಎಲ್ಲರ
ಬಳಿಸಾರುವಳೆಂದು ?
ಪಕ್ಷಪಾತವಿರದ ಪ್ರಕೃತಿ
ನೀಡಿದಂಥ ಸಿರಿಯು
ಸೋದದರೆಲ್ಲರಿಗೆ ಎಂದಿಗೆ
ಸಮ ಸಮ ದೊರೆಯುವುವು?
ಅನ್ನ ನೆರಳು ಅರಿವ-ಜೊತೆಗೇ
ಮರ್ಯಾದೆಯ ದುಡಿಮೆ
ಮೇಲು ಕೀಳು ಎನದೆ – ಎಂದಿಗೆ
ಎಲ್ಲರಿಗೊದಗುವುವು?
ಕವಿದ ಮಂಜು ಕರಗಿ-ಬೆಳಕಿಗೆ
ಏಳಲಂಥ ನಾಡು,
ಬಿಟ್ಟು ಹಳೆಯ ಹಾದಿ-ದೇಶ
ತುಳಿಯಲಿ ಹೊಸ ಜಾಡು;
ಪ್ರೇಮ ದುಡಿಮೆ ತ್ಯಾಗ-ತರಲಿ
ಹೊಸ ಬೆಲೆಯೊಂದನ್ನು,
ತುಳುಕಲಿ ಮಿಂಚನ್ನು – ಭಾವೀ
ಪ್ರಜೆಗಳ ಎಳೆಗಣ್ಣು.
*****