ಆತ ನಾಲ್ಕು ರಸ್ತೆಗಳು ಸೇರುವಲ್ಲಿ ಬಂದು ಅತ್ತ-
ಅಳುತ್ತಲೇ ಇದ್ದ. ಕಾರುಗಳು, ಬಸ್ಸುಗಳು,
ಟಾರ್ಪಲಿನ್ ಹೊದ್ದ ಭಾರವಾದ ಟ್ರಕ್ಕುಗಳು
ಹಾದು ಹೋಗುತ್ತಲೇ ಇದ್ದುವು.
ಎತ್ತಿನ ನಿಧಾನ ಗಾಡಿಗಳು
ಸಾಗುತ್ತಲೇ ಇದ್ದುವು.
ನಿದ್ರಿಸುವ ನಗರ ಎಚ್ಚರಾಗುತ್ತಿತ್ತು. ಮತ್ತೆ ನಿದ್ರಿಸುತ್ತಿತ್ತು
ಭಾರೀ ಕಸದ ಡಬ್ಬಿಗಳ, ಬೆದೆಯೆದ್ದ ಹಂದಿಗಳ,
ಎಲ್ಲಿಂದಲೋ ಬಂದು ಹೋಗುವ ರೈಲುಗಳ ನಡುವೆ
ತನ್ನ ನಿರಾಳ ಆಲಸ್ಯದಲ್ಲಿ ಬಿದ್ದು.
ಕಳ್ಳಿನಂಗಡಿಯಲ್ಲಿ ಕೂತವರು
ತರಕಾರಿಗೆ ಬಂದ ಹೆಂಗಸರು
ಕೆಲಸಕ್ಕೆ ಕಾಯುವ ಕೂಲಿಗಳು
ಯಾರೂ ಗಮನಿಸಲಿಲ್ಲ-
ಸುತ್ತಲೂ ಅಣಬೆಗಳು ಹುಟ್ಟುವ ತನಕ
ಲಿಲಿಹೂಗಳು ಬೆಳೆಯುವ ತನಕ
ಅರಿಯದೆ ಬಂದ ಮಳೆ, ಯಾರದೊ ನಿಟ್ಟುಸಿರ ಮೇಲಿಂದ
ಬೀಸಿದ ಗಾಳಿ, ಚಳಿಗಾಲದ ಇರುಳು
ತಟ್ಟಿಯೂ ತಟ್ಟಿದಂತಿದ್ದವನು
ಯಾರಿಗೂ ತಿಳಿಯದಲೆ ಎದ್ದು ನಿಂತಿದ್ದನೊಮ್ಮೆಲೇ
ಸಾವರಿಸಿಕೊಂಡು, ಆವರಿಸಿಕೊಂಡು
ನಿಂತು ಏನೋ ಹೇಳಹೊರಟವನು
ಹೇಳುವುದೇಕೆಂದು ತಟಸ್ಥವಾದಂತೆ
ಬಿರಿದೂ ಬಿರಿಯದ ನಗೆ
ಬಚ್ಚಿಟ್ಟ ಪ್ರತಿಯೊಬ್ಬರ ಪಾಪದಂತೆ
*****