ಬದುಕು ಬೆಳಕಾಗಲಿಲ್ಲ
ಮುಳ್ಳಿಗೆ ಸಿಕ್ಕಿಕೊಂಡ ಬಟ್ಟೆ
ಮೂರಾಬಟ್ಟೆ
ಅಂದಿನ ಆ ಕಾತುರ ನಿಟ್ಟುಸಿರು
ಹಂಬಲಿಕೆ ಇಂದಿಲ್ಲ
ಸವಿಗನಸಿಗೂ ಇಂದು ಬರ
ನಿನ್ನೆ ಕಟ್ಟಿದ ಕಲ್ಪನೆಯ
ಹಾಯಿ ದೋಣಿಗಳ ಸಾಲು
ಇಂದು ಪಟ್ಟ ಬಿಚ್ಚಿ ಹೋಗಿ
ದೆಸೆ ಕಾಣದೆ ದಿಕ್ಕಾಪಾಲು
ಮೋಡ ಚದುರಿ ಬಿಸಿಲು
ಇಣುಕುವ ಹೊತ್ತು
ಮೈಯೊಡ್ಡಿ ತಣಿಯುವ ಕ್ಷಣ
ಕಾರ್ಮೋಡಗಳು ಮುತ್ತಿ ಮುಸುರಿದ್ದೇಕೆ?
ನಲ್ಲ ಇಂದು ಅಂದಿನಂತಿಲ್ಲ
ಬಳಲಿಕೆಯ ಬೇಗೆ
ಅಗಲಿಕೆಯ ದಾಗ
ಪಾಠ ಕಲಿಸಿದೆ ಬದುಕು
ಬೇವು ಬೆಲ್ಲ, ಇಲ್ಲ ಬೆಲ್ಲ
ಬರಿಯ ಬೇವೆ ಎಲ್ಲಾ
ಅದರಕ್ಕೆ ಕಹಿ, ಉದರಕ್ಕೆ ಸಿಹಿ
ಹೌದಲ್ಲ, ಕಾನನದೊಳಗೂ ಬದುಕ
ಚಿಗುರಿಸುವ ಧೈರ್ಯ ಬಂದುದ್ದು
ಸುಳ್ಳಲ್ಲ – ಬಾಳು ಬೆಳಕಾಗಲಿಲ್ಲ ಸತ್ಯ
ಅಂಧಕಾರಕ್ಕೆ ಹುಡುಕುತ್ತಿದ್ದೇನೆ ಚಿಮಣಿ ನಿತ್ಯ
*****