ತಂಗಾಳಿ ಬೀರಿದೆ, ಬಿರುಗಾಳಿ ಬೀಸಿದೆ
ಜಗವೆಲ್ಲ ನಲಿದಿದೆ, ಅಳುವಿನಲ್ಲಿ ಮುಳುಗಿದೆ
ಗಗನ ಹೊಳೆದಿದೇ, ಮೇಘ ಮುತ್ತಿದೆ
ಮೊಗವೊಂದು ಬಾಡಿದೆ, ಮತ್ತೊಂದು ಅರಳಿದೆ
ಅತ್ತ ಮರಣ-ಇತ್ತ ಜನನ; ಇಳೆಯೊಳೆಲ್ಲೆಡೆ
ಕತ್ತಲಂತೆ ಬೆಳಕಂತೆ ಎರಡು ಕೂಡಿವೆ
ತುತ್ತೊಂದೆಡೆ ಹೊಟ್ಟೆಗಿಲ್ಲ, ಮೃಷ್ಟಾನ್ನವೊಂದೆಡೆ
ಅತ್ತ ಹಾಗೆ, ಇತ್ತ ಹೀಗೆ ಜಗವ ತೂಗಿದೆ
ತಾಮಸರು ನಿಂದಿಹರು, ಸುರಜನರು ಬ೦ದಿಹರು
ಕಿಕ್ಕಿರಿದ ಜಗತುಂಬ ಪುಣ್ಯ ಪಾಪಂತೆ
ಮುಕ್ಕರಿಪ- ಎಚ್ಚರಿಪ ಜನರೆಲ್ಲರಿಲ್ಲಿಹರು
ಇಕ್ಕೆಲದ ಜನವೆಲ್ಲ ಜಗವನ್ನೇ ಜೈಸಿದೆ
ಬ್ರಹ್ಮಚರ್ಯ-ಕಾಮಚರ್ಯ ಎಲ್ಲ ನಡೆದಿವೆ
ಸುತ್ತೆಲ್ಲಾ ರಣಕಹಳೆ, ನಡುವಿದೆ ಶಾಂತಿ ಹೊಳೆ
ಧರ್ಮ-ಕರ್ಮ-ದುಷ್ಕರ್ಮ ಕೂಡಿ ಬಾಳಿವೆ
-ಮಿಥ್ಯ ಎಲ್ಲ ಸೇರಿ ಸಮರಸದ ಜಡಿಮಳೆ
ದೇವಗುಡಿಯೊಂದು, ನಾಸ್ತಿಕ ನುಡಿ ಇನ್ನೊ೦ದು
ಬೇವು-ಬೆಲ್ಲ, ಶಿಗೆ-ಎಣ್ಣೆ, ಅಬ್ಬ ತಾಕಲಾಟವೆ
ನೀವು-ನಾನು, ನೀನು-ನಾವು, ಮೇಲು-ಕೀಳು ಎಂದು
ಅವನು ಹೋಲೆಯನಿವನು ಒಡೆಯ; ಅಳುವೆ-ಬಾಳುವೆ
ಪ್ರಳಯ, ನಾಶ, ದುಃಖ, ನರಕ ಸೊಕ್ಕಿನಿಂದ ನಕ್ಕಿವೆ
ಬೆಳವು, ಉಳಿವು, ಸಿರಿಯು, ಸರ್ಗ ಎಲ್ಲ ಉಕ್ಕಿವೆ
ಏಳು-ಬೀಳು, ದಿಬ್ಬ-ತಗ್ಗು, ಇರುಳು-ಹಗಲು ಸೇರಿವೆ
ಸೆಳೆದು-ಎಳೆದು ಜನವನೆಲ್ಲಾ ಕಾಡಿ-ನೀಡಿ ನೋಡಿವೆ
*****