ಅಂತೆ ಗುಣಿಸಿದೊಡೆಂತು ಶೂನ್ಯದೊಳು? ಕೂಡಲರಿಯದೆ

ಅಂತೆ ಗುಣಿಸಿದೊಡೆಂತಾತುರದೊಳ್ ಆನಂದವಧಿಕವಾಗಲಿ ಕೆಂದೆನುತಿಳೆಯಂತರಂಗವನು ಅವಗಣಿಸುತಲಿ ಎಂತು ನೋಡಿದೊಡಂ ಇಲ್ಲಿ ನಡೆವುದು ಬರಿದಪ್ಪ ಅಂಮರ ಲೆಕ್ಕ, ಕೂಡಿ ಕಳೆಯುವ ಲೆಕ್ಕ, ಹುಟ್ಟು ಸಾವಿನ ಲೆಕ್ಕ ಅಂತಿದನು ಗುಣಿಸಿದೊಡಂ ಭಾಗಿಸಿದೊಡಂ ಅಪಾಯ ಪಕ್ಕಾ - ವಿಜ್ಞಾನೇಶ್ವರಾ...

ಕೂಡಲರಿಯದಿದೇನು ಗುಣಿಸುವುದೋ? ಶೂನ್ಯದೊಳು

ಕೂಡಿ ಬಾಳಿದೊಡೆಲ್ಲ ತಲೆಮಾರೊಂದಾದೊಡದು ಕುಟುಂಬ ಕೂಡಿ ಬೆಳೆದೊಡೆಲ್ಲ ಗಿಡಮರಬಳ್ಳಿಗಳೆಡೆಗದುವೆ ಕೃಷಿಯು ಕೂಡಿ ಬಾಳಲು ಕೂಡಿ ಬೆಳೆಯಲು ಮಮತೆಯಂತರ್‍ಜಲ ಕುಡಿಯ ಬೇಕಲ್ಲದಿದೇನಂಗಡಿ ಸರಕಿನವಸರವು ಕಾಡಿನೊಳೆಲ್ಲ ಕೂಡಿ ಬಾಳ್ವಂತಿರದೆ ಅದೆತ್ತಣಂತರ್‍ಜಲವು - ವಿಜ್ಞಾನೇಶ್ವರಾ *****

ಕುಂತಂತೆ ಧನ ಧ್ಯಾನಗಳನ್ನು ಬೇರೆನುವ ಜ್ಞಾನವಿನ್ನೆಷ್ಟು ದಿನವೋ?

ಎಂತು ನೋಡಿದೊಡಂ ಅನ್ನ ಮತ್ತಾನಂದಗ ಳೊಂದೆ ನಾಣ್ಯದೆರಡು ಮುಖವಿರುತಿರಲು ಅಂತೆ ಕುಂತು ದುಡಿವುದೇನೋ ಅನ್ನಕೆಂದೊಂದಷ್ಟು, ಮತ್ತಾ ನಂದವನರಸಿ ಅಲೆವುದೇನೋ ಮನೆ ಬಿಟ್ಟು ರುಂಡ ಮುಂಡಗಳೊಂದಾಗಿ ದುಡಿದರಾ ಜೀವನವೇ ಕೃಷಿಯಕ್ಕು -ವಿಜ್ಞಾನೇಶ್ವರಾ *****

ದೇಹಿ ಎನ್ನುವಂತೆ ಆ ಮರವ ಬದಲಿಸಿದೊಡೇನು ಲಾಭವೋ?

ದ್ರೋಹವಲಾ ತಮ್ಮ ಬಾಲ್ಯವನೋದಿನೊಳೇರಿಸಿದ ಮನುಜ ಸಹಸ್ರಾಬ್ಧ ಬಾಳುತುಳಿದ ಜೀವಿಗಳ ಬಾಳಿಸು ವ ಹಲಸು ಮಾವಿನಂದದ ಗಿಡಕೊಂದು ದಶಕದ ಬಾಲ್ಯವನು ಸಹಿಸದದನು ತರತರದ ಕಶಿಯೊಳವಸರದಿ ಹರಿಸುವುದು ಬಹು ಕಾಲವೃದ್ಧಿಯೊಳಪ್ಪ ಮೋಪಿಂಗು ಕಾಸಿನ ಕಶಿಯಿಕ್ಕುವುದು - ವಿಜ್ಞಾನೇಶ್ವರಾ...

ವ್ಯಾಜ್ಯವಿದ್ಯಾಕೋ? ಸಹಜ ಬೀಜದ ಕುರಿತು

ಬೀಜ ವೃಕ್ಷ ನ್ಯಾಯವದಂತಿರಲಿ ಅನ್ಯಾಯವದಾವ ಬೀಜಕುಂ ವೃಕ್ಷಕುಂ ಆಗದಿರಲಿ, ರಾಶಿ ಬೀಜವಿದ್ಯಾಕೆನುತ ಕೋಜ ಬೀಜ ಬೆಳೆಸುವಾಧುನಿಕ ಕೃಷಿ ಬಾಳದಿರಲಿ ಯೋಜನೆಗಳಂತಿಮದಿ ಕೃಷಿ ಹೆಸರಿನೊಳಾ ಪೂಜ್ಯ ಬದುಕಿನೊಸರನಾರಿಸದಿರಲಿ - ವಿಜ್ಞಾನೇಶ್ವರಾ *****

ಎಮ್ಮಾದಿ ಪುರುಷರ ಸಂಪ್ರದಾಯವೆಂತಿತ್ತು ಗೊತ್ತಾ?

ಎಮ್ಮ ಪದ ಸಂಪ್ರದವಾದೊಡೆಮ್ಮ ಜೀವನ ಕ ಸೀಮ ಸಿರಿ ಸಂಪದ ಚಯನ ಬೇಕಿಲ್ಲವೆನು ತೆಮ್ಮ ಪಿರಿಯರಂದದ ಕೃಷಿಯನುಸುರಿದರು ಕಮತದೊಳೊಸರುವ ಬೆವರಿನೊಳಮ್ಮನರ್ಚನೆ ಮಾಡಿ ತಮ್ಮನ್ನದಾರ್‍ಜನೆಯ ದೋಷ ಕಳೆಯುತ ಬೆಳೆದಿಹರು - ವಿಜ್ಞಾನೇಶ್ವರಾ *****

ಕೊಂಡು ಕಲಿಯುವುದೇನು? ಉಂಟು ಕಲಿಯದ ಕೃಷಿಯ

ಕೃಷಿ ಕ್ಷಮತೆ ಏರಿಹುದೆಂದು ಇಳುವರಿಯನಧಿ ಕಗೊಳಿಸಿದ ಖುಷಿಯಲೊರಲುವರೊಂದಷ್ಟು ಜನರಾದೊಡಂ ಕೃಷಿ ವೆಚ್ಚವೇರಿರಲು ಕ್ಷಮತೆಯ ಮಾತೆಲ್ಲಿಹುದು? ಕ್ಷಮತೆಯಳೆಯಲು ಕೋಷ್ಠ ಮಾಪನದ ಹಂಗ್ಯಾಕೋ? ಕೆಳಗಿಳಿದ ಜಲಮಟ್ಟವೇರಿರುವುಷ್ಣತೆಯಷ್ಟೆ ಸಾಕೋ - ವಿಜ್ಞಾನೇಶ್ವರಾ *****

ಬರಿ ಸುಳ್ಳಲ್ಲವೇ? ಕೃಷಿ ತಜ್ಞರೊರೆಯುವುದು?

ಒರೆಯುವೊಡೆ, ಬರೆಯುವೊಡೆ ಸಾಲದದು ಕೃಷಿಯ ಕುರಿತೋದಿದೊಡೆ. ಮಾಡದೋದಿದ ಮಂಡೆ ಬರಿ ಗೂಡೆ ಕೊರಡ ನೆಟ್ಟು ನೀರೆರೆದೊಡದು ಮರವಪ್ಪುದುಂಟೇ? ಸೂರ್‍ಯ ಸಂಶ್ಲೇಷಣೆಯ ಕಷ್ಟವನಿಷ್ಟದೊಳನುಭವಿಪ ಬರಿ ಹುಲ್ಲನೀಕ್ಷಿಸಲದುವೆ ಕೃಷಿ ಪಾಠವನೊರೆಗು - ವಿಜ್ಞಾನೇಶ್ವರಾ *****

ಬಟ್ಟೆ ತೊಳೆದಂತದಲ್ಲವೇ? ಕೃಷಿ ಕಷ್ಟ ಬಾಳ ಬಟ್ಟೆಗೆ?

ಬಟ್ಟೆಯದೆಷ್ಟು ಸುಂದರವಾದೊಡಂ ತೊಟ್ಟ ಮಾರನೆಯ ದಿನಕದು ಹಳತು ನೆಟ್ಟ ಸಸಿಯದು, ಸವಿಯ ಫಲವದು ಸೃಷ್ಟಿಯೊಳನುದಿನವು ಹೊಸತು ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು - ವಿಜ್ಞಾನೇಶ್ವರಾ *****

ಕಾಯ ಬೆಳೆಸಿದರೆ ಕೊಬ್ಬರಿ ಮಾಡ್ಯದನು ಕರಗಿಸಬೇಡವೇ?

ಕೃಷಿಯೆಂದು ತೆಂಗನು ನೆಟ್ಟೊಡದನೊಣಗಿಸುತ ಕೊಬ್ಬರಿ ಮಾಡಿ ಹಿಂಡಿದೆಣ್ಣೆಯ ಬಳಸಲು ಬೇಕು ಕೊಂಡುಣುವ ಕುಪ್ಪಿಯೊಳಿಹುದು ಕಲಬೆರಕೆಗಾಹ್ವಾನ ಖೊಟ್ಟಿಯುದ್ಯೋಗದೊಳು ಜೀವನವೆ ಕಲಬೆರಕಾಗಿರಲು ಕಸಬರಿಕೆಯೆಷ್ಟಿದ್ದೊಡಂ ಸಾಲದಾಗಿಹುದದನು ಗುಡಿಸಲು - ವಿಜ್ಞಾನೇಶ್ವರಾ *****