ಮೌನದ ಚಿಪ್ಪೊಳಗೆ ನುಸುಳಿ
ಗುಪ್ತಗಾಮಿನಿಯಂತೆ ಹರಿದು
ಅಜ್ಞಾನದಲ್ಲಿಯೇ ಅಸ್ತಿತ್ವವಿಲ್ಲದ
ಅಗೋಚರಗಳ ನಡುವೆ ನರಳಿ
ಬೂದಿಯಾದ ಕನಸುಗಳು ಹೊರಳಿ
ಬದುಕ ಬಯಲ ದಾರಿಯಲಿ
ಮೇಣದಂತೆ ಕರಗಿ ಕೊರಗಿ
ಹುಟ್ಟೇ ಶಾಪ, ತಾರತಮ್ಯ ವಾಸ್ತವ
ನಾಳೆಗಳಿಲ್ಲದ ಬದುಕಲಿ
ಬಿಂದುವಾಗಿಯೇ ಉಳಿದು
ಕೂಡು ಕಳೆಯುವಾಟದಲಿ
ಕೊನೆಗೂ ಮೊತ್ತವಾಗದೆ
ಕನಸುಗಳ ಹೆರುವ ಮುನ್ನವೇ
ಸ್ರವಿಸಿ ಭ್ರೂಣಹತ್ಯೆ ಗೈದಂತೆ
ಬಂಜೆಯೊಡಲಲಿ ಉರಿವಜ್ಜಾಲೆಯಂತೆ
ಉರಿದುರಿದು ಬೆಂದು ಕರಕಾಗಿ
ಕೊನೆಗೆ ನೀ ಬಿದ್ದೆ ಉಲ್ಕಾಪಾತವಾಗಿ
ನಿನ್ನಂಥವರಿಂದಲೇ ವಿಜೃಂಭಿಸುತ್ತವೆ
ನಿನ್ನೆದುರು ನಿಂತ ಶಕ್ತಿಗಳು
ಹೊಸಕಿ ಹಾಕಲೆತ್ನಿಸುತ್ತವೆ ಹೂಮನಗಳ
ದುರ್ಬಲತೆಯ ಸೋಗಿನಲಿ ಅಸಹಾಯಕತೆಯ
ನೆವವಾಗಿಸಿ ನೀನು ಅಳಿದು
ನಿನ್ನಂತವರನೂ ಅಳಿಸುವೆ
*****