ಮುಗಿದುಹೋಯ್ತು ಬಂದ ಕೆಲಸ
ಇನ್ನು ಹೊರಡಬೇಕು
ದಿಗಂತದೆಡೆಗೆ ಪಯಣ
ಮುಗಿದು ಹೋದ
ಬಾಳಿಗರ್ಥ ಹುಡುಕಿ
ವ್ಯರ್ಥವಾದ ಮೇಲೆ
ಹೋಗಿ ಸೇರುವ ಕಡಲ ತಡಿಯ
ಕ್ಷಿತಿಜದಂಚಿನ ಬೆಳ್ಳಿ ರೇಖೆಯ
ಮೇಲೆ ಬಾನಿರಬಹುದು ಶೂನ್ಯ
ಶೂನ್ಯ ಶೂನ್ಯವ ಮೀರಿ ನಿಲ್ಲುವ
ಕೆಚ್ಚೆದೆ ಬಂದಿದೆ,
ಬೆಚ್ಚದೇ ನಡೆಯಬೇಕೀಗ
ಕಳೆದು ಹೋಗಿಹ
ಅನಂತ ಸಂಬಂಧಗಳ ಮೇಲೆ
ಎಳೆಯಬೇಕೀಗ ಕಲ್ಲಿನಾಗೋಡೆ
ನೆನೆವೂ ಬರದಂತೆ
ಅನುಭವವೂ ಇರದಂತೆ
ಕಪ್ಪಾಗಬೇಕು ಎಲ್ಲಾ ಹಿಂದಿನ ಚಿತ್ರ!
ಹೊರಟಿಹ ಕಾರ್ಯ ಹಿರಿದೇನಲ್ಲಾ
ಆದರೆ ಮಾಡಲಿರುವುದೆಲ್ಲಾ ದೊಡ್ಡದೇ
ಬಾನಿನಾಚೆಯಲಿ ಬೆಳಕಿದೆಯೋ?
ಕತ್ತಲಿದೆಯೋ?
ಬರಿಯ ಬೆತ್ತಲಿದೆಯೋ? ನಮಗೆ ತಿಳಿದಿಲ್ಲ.
ಹೊರಟಿರುವೆವು ನಿರಾಶ್ರಿತರಾಗಿ
ಭುವಿಯಿಂದ ಕ್ಷಿತಿಜದೆಡೆಗೆ
ನಾವಾರೂ ಸ್ವಾರ್ಥಿಗಳಲ್ಲ
ಕ್ಷಿತಿಜ ನಮ್ಮದೂ ಅಲ್ಲ
ಬೇರಾರದೂ ಆಗಿರಲಿಲ್ಲ!
ತಲುಪಬೇಕಿರುವ ಗುರಿ ಒಂದೇ ಈಗ
ತಲುಪುವುದೂ ಮುಖ್ಯವಲ್ಲ
ದಾರಿ ಸಾಗುವುದೇ ಮುಂದೆ?
ಎಂಬುದೇ ಮೊದಲ ಪ್ರಶ್ನೆ-
ಹೆಚ್ಚಾಗೇ ಇರಲಿ ಎಂದು
ಬುತ್ತಿ ತಂದಿದ್ದೇವೆ ಜಾಸ್ತಿಯೇ
ಅದು ಮುಗಿದು ಹೋಗುವ ಮುನ್ನ
ಸೇರಬೇಕು ದಿಗಂತವನ್ನ
ಆಸೆ ಹಿರಿದೇನಲ್ಲಾ
ಆದರೆ ಗುರಿ ಮಾತ್ರ ಹಿರಿದೇ
ಸಾಗುತಿರುವೆವು ನಾವು ಕ್ಷಿತಿಜದೆಡೆಗೆ
ನಿರಂತರ ಯಾತ್ರಿಕರು ನಾವು
ಗುರಿ ಸೇರಬಲ್ಲೆವೇ?
ಇಲ್ಲ ನಮ್ಮ ಗುರಿಯೇ ಮರೀಚಿಕೆಯೇ?
ಎಂಬುದೇ ಉಳಿದ ಪ್ರಶ್ನೆ ಈಗ!
*****