ಕನ್ನಡಿಯನು ಪ್ರೀತಿಸುತ್ತಾ
ಪ್ರೀತಿಸುತ್ತಲೇ
ಕನ್ನಡಿಯೇ
ಆದ ಹುಡುಗಿ,
ಹಾಡಲಾಗಲಿಲ್ಲ
ಎದೆಯಾಳದ ಎಲ್ಲ
ಎಲ್ಲಾ ಹಾಡುಗಳನ್ನು!
ಬರಿಯ ಪ್ರತಿಫಲಿಸುವ
ಕನ್ನಡಿಗೆ
ಎಲ್ಲಾ ಅವ್ಯಕ್ತಗಳೂ
ದಕ್ಕುವುದಾದರೂ ಹೇಗೆ?
ನಿನ್ನೆಗಳಲ್ಲಿ ಮನ ತುಂಬಿ
ಹಾಡಲಾಗದ ಹುಡುಗಿ
ಇಂದು ತನ್ನ ಪ್ರೀತಿಯ
ಕನ್ನಡಿಯನೇ ಒಡೆದು
ನಾಳೆಗಳಲ್ಲಿ ಹಾಡತೊಡಗಿದಾಗ.
ಎಲ್ಲ ಹಾಡುಗಳೂ
ಹೊರಹೊಮ್ಮಿ ಹಾರಿ,
ಎದೆಯಿಂದ ಜಾರಿ,
ಬಾನಿನಂಚನು ಮೀರಿ,
ಪ್ರೇಮಸಂದೇಶ ಸಾರಿ,
ಎತ್ತರೆತ್ತರಕೆ ಏರಿ,
ನಿಂತಾಗಲೊಮ್ಮೆ
ಕಣ್ಬಿಟ್ಟ ಹುಡುಗಿ
ಚೂರಾದ ಕನ್ನಡಿಯ
ಇನ್ನೊಮ್ಮೆ ಒದ್ದು
ಮತ್ತೆ ಮತ್ತೆ ಹಾಡುತ್ತಾಳೆ
ತಾನೇ ಹಾಡಾಗುತ್ತಾಳೆ!
*****