ಪ್ರಭೂ ಈ ಬಾಳಿನಲ್ಲಿ ನನ್ನದೇನಿದೆ?
ಎಲ್ಲ ನೀನೆ ನೀಡಿದ ಕೃಪೆಗಳಾಗಿವೆ.
ಬಾಳಿಗೊಂದು ಪಾಯವಾಗಿ ಸಿಕ್ಕ ಮನೆತನ
ಸುತ್ತ ಎದ್ದ ಬೇಲಿ ಬಳ್ಳಿ ಮಣ್ಣ ಕಣ ಕಣ,
ಆಗ ಈಗ ಭೇಟಿಕೊಟ್ಟ ನಾಲ್ಕು ಮಳೆ ಹನಿ
ಬಿಸಿಲ ತಾಪದಲ್ಲಿ ಉಳಿದು ಬಂದ ಬೆಳೆ ಹನಿ.
ಪಡೆದ ಪತ್ನಿ ಮಕ್ಕಳೊಡನೆ ಸರಳ ಜೀವನ
ಆಗದವರು ನೀಡಿದ ಉರಿಯ ಬಾಗಿನ,
ಮಧ್ಯದಲ್ಲಿ ಅಲ್ಲಲ್ಲೇ ಮುಳ್ಳು ಮುತ್ತುಗ
ನೂರು ಚೂರಿಕಲ್ಲು ಚುಚ್ಚಿ ಕಾಲು ಧಗಧಗ.
ಎಷ್ಟೆ ರಕ್ತ ಸುರಿದರೂ ಬಾಳು ಇಷ್ಟವು
ಇದನು ಎಸೆದು ಹೋಗಲು ಮನಸು ಒಪ್ಪದು,
ಕೊಟ್ಟುದೆಲ್ಲ ತಾಳಿ ನಿಂತ ನಿನ್ನ ಭಕ್ತನ
ಕಾಣದವನೆ ಕಾಯೊ ನೀಡಿ ಊರೆಗೋಲನ.
*****