ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ
ಎಚ್ಚರವಿರಲಿ ದಾರಿಹಿಡಿದು ನಡಿ || ಪ ||
ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ
ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು || ಅ. ಪ. ||
ಹರನ ಕಡಿದು ಕೈಯೊಳು ಕೊಡಿಸಿ ಕಪಾಲವ
ಭರದಿಂದ ಭಿಕ್ಷಕೆ ದೂಡಿತಿದು
ಸುರಲೋಕಕ್ಹೋಗಿ ಇಂದ್ರನ ಸರೀರದಿ ಬಹು-
ಪರಿ ಛಿದ್ರವ ಮೂಡಿಸಿತಿದು || ೧ ||
ನರ ಪಾಂಡುಪುತ್ರರೊಳು ಬೆರೆದು ಆರೋಗ್ಯದಿ
ಪರಿಭವಗೆಟ್ಟು ತಿರುತಿರುಗಾಡಿತಿದು
ಧರೆಯೊಳು ಗುಲಗಂಜಿಕೊಪ್ಪದೊಳಿರುವಂಥಾ
ಕುರಿಗಳ ಕಡಿದಬ್ಬರಿಸುತ ಬರುತದೆ || ೨ ||
ಯಾಕೆ ಬಂದೆವು ಈ ಊರೊಳಗದ್ಭುತ
ಸಾಕಿದಾವಿನಕರ ಕಡಿದಿತಂತೆ
ಬಾ ಕಂಡ್ಯಾ ಲಕ್ಷ್ಮೀಪುರಕೆ ಹೋಗುವ ಮಾರ್ಗದಿ
ಬೇಕೆಂದು ನಿಂತಡ್ಡಗಟ್ಟಿ ಬೊಗಳುವದೊ || ೩ ||
ನಾಲ್ಕುಮಂದಿ ನಾವು ಏಕಾಗಿ ಹೋಗೋನು
ಜೋಕೆಯಿಂದದರಕಡೆ ನೋಡದಂತೆ
ಕಾಕುಜನರಿಗೆ ಕಣ್ಣಿಟ್ಟರೆ ಬಿಡದಮ್ಮಾ
ನೀ ಕೇಳೆ ಗೆಳತಿ ಇಲ್ಲ್ಯಾಕ ಕುಂತಿ || ೪ ||
ಬಳಲಿಸುವದು ಬ್ರಹ್ಮಾಂಡದೊಳಗೆ ಇನ್ನ
ಉಳಿಯೋದು ಕಷ್ಟ ನಾ ಯಾರಿಗ್ಹೇಳಲಿ
ಲಲನಾಮಣಿಯೆ ಅಚ್ಚಬಿಳೇದು ದೊಂಡೇದಬಾಲಾ
ತಿಳುನಡಾ ಜೋಲ್ಗಿವಿಯ ಬಾವಲಿ || ೫ ||
ಇಳಿಯೊಳೆಲ್ಲರ ಹಲ್ಲಲ್ಲ್ಹಿಡಿದು ಸವರುತ
ತಳಮಳಗೊಳಿಸಿತಿನ್ನ್ಯಾಂಗ ತಾಳಲಿ
ಚಲ್ವ ಶಿಶುನಾಳಧೀಶನೊಲಿಮಿಯಿಂದ
ತಿಳಿದು ಜ್ಞಾನದ ಮನಿಯೊಳಡಗಿರು ಕಂಡ್ಯಾ || ೬ ||