ಅಮ್ಮ
ಬೆಳಗೆದ್ದು
ರೊಟ್ಟಿ ಸುಡುವದೆಂದರೆ
ನಮಗೆ ಪಂಚಪ್ರಾಣ
ಕತ್ತಲು ತುಂಬಿದ ಗುಡಿಸಲಿಗೆ
ಒಲೆಯ ಬೆಂಕಿಯೇ ಬೆಳಕು
ಸುಟ್ಟು ಸುಟ್ಟು ಕರ್‍ರಗಾದ
ಬಿಳಿ ಮೂರು ಕಲ್ಲು
ಮೇಲೊಂದು ಕರ್‍ರಾನೆ ಕರಿ ಹೆಂಚು
ಒಲೆಯೊಳಗೆ ಹಸಿ ಜಾಲಿ
ಮುಳ್ಳು ಕಟ್ಟಿಗೆ ಒಟ್ಟಿ
ಹೊಗೆಯೊಳಗೆ ಉಸಿರು ಕಟ್ಟಿ
ಮನೆಯೊಳಗೆ ಉಸಿರೆರೆದವಳು
ಅಮ್ಮ, ಕಾಲು ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಕೊಣಿಗೆಯಲಿ ಹಿಟ್ಟರವಿ
ಆಸೆಯ ಒಡ್ಡು ಕಟ್ಟಿ
ಹಗಲೆಲ್ಲ ದುಡಿದ ಮೈ ಬಸಿದ ಬೆವರು
ಹದಕೆ ಕಾಯಿಸಿದ ಎಸರು
ಸುರುವಿ ಓರೊಟೊರಟ ಕೈಯಿಲೆ
ಮೆತ್ತ ಮೆತ್ತಗೆ ಕಲಸಿ
ಗಾಲಿಯಂಗೆ ಗುಂಡಗೆ ನಣ್ಣನೆಯ
ಮೂರ್ತಿ ಮಾಡಿದವಳು
ಅಮ್ಮ, ಕೈಯ್ಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಎದೆಯ ತುಡಿತಗಳ ಬಡಿತ
ಹದವಾಗಿ ಮೆದುವಾಗಿ
ಲಯಬದ್ಧವಾಗಿ ಹಿಟ್ಟ
ತಟ್ಟಿದರೆ ದುಂಡ ದುಂಡಗೆ
ಹುಣ್ಣಿಮೆಯ ಚಂದಿರ
ಕಾದ ಕರಿಹೆಂಚಿನ ಮೇಲೆ
ಆಕಡೀಕಡೆ ಸುಟ್ಟು
ಹೊಟ್ಟೆಗಿಟ್ಟು
ರಟ್ಟೆಗೆ ಬಲವ ಕೊಟ್ಟವಳು
ಅಮ್ಮ, ಮೈಯ್ಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಜೀವ ಜೀವದ ಸಾರ
ಕುಸಿವೆಣ್ಣೆ ಒಣಕಾರ
ಈರುಳ್ಳಿ ಹಸಿಮೆಣಸು
ಬೆಳ್ಳುಳ್ಳಿ ಉಂಚೆತೊಕ್ಕು
ದಿನಕೊಂದು ಹೊಸ ರುಚಿಯು
ರೊಟ್ಟಿಯೊಳಗೇ ಸುತ್ತಿ
ಉಣಬಡಿಸಿ
ಸುತ್ತೇಳು ಲೋಕವ ತೋರಿದವಳು
ಅಮ್ಮ. ಜೀವ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ
ಕಟ್ಟಿಗೆಯೊಟ್ಪಗೆ ಸುಟ್ಟು
ಹೊಗೆಯೊಳಗೇ ಕುದ್ದು
ಹೆಂಚಂತೆ ಕಾದು
ರೊಟ್ಟಿಯಾಗಿ ಬೆಂದ
ಒಲೆಯ ಮುಂದಿನ ಅಮ್ಮನ ಮುಖ
ನಿಗಿ ನಿಗಿ ಕೆಂಡ!
*****