ಸತ್ಯಲೋಕ ಬೇರೆ, ನಿತ್ಯಲೋಕ ಬೇರೆ
ಎರಡನೂ ಕೂಡಿಸುವ ಅದ್ವೈತಿಯ ಮೂರ್ಖತನ ಬೇಡ
ಇಲ್ಲಿ ನೀನು ಸರಿಯಾಗಿ ಬಾಳಬೇಕೆಂದರೆ
ಸಿಪ್ಪಿ ಬಣ್ಣ ವಾಸನೆ ಹೊಳಪುಗಳು ಬೇರೆ
ರಸ, ಬೀಜ, ಭ್ರೂಣ, ಬೇರುಗಳು ಬೇರೆ
ಮಣ್ಣು, ಉಬ್ಬ ತಗ್ಗು, ನೀರಾಟ, ಏರಾಟ, ಭೋರಾಟಗಳು ಬೇರೆ
ಖನಿಜ, ಸಾಂದ್ರತೆ, ಎಲುಬು, ಪಳೆಯುಳಿಕೆಗಳು ಬೇರೆ ಬೇರೆ
ಇವೆರಡನು ಕಲಬೆರಕೆ ಮಾಡಲಾದೀತೆ?
ಮೇಲೆ-ಹೊರಗೆ ಇರುವುದು ಬೇರೆ
ಕೆಳಗೆ-ಒಳಗೆ ಇರುವುದು ಬೇರೆ
ಅದು ಅದೇ, ಇದು ಇದೇ
ಇನ್ನೂ ಎರಡು ಬಗೆಯ ಕಣ್ಣಿರಬೇಕೆನ್ನಿರಿ
ಅದು ಬಿಟ್ಟು ಮಿಥ್ಯೆ-ಮಾಯೆ ಸುಳ್ಳು ಹಾಗೆ ಹೀಗೆಂದರೆ
ಆತ್ಮದ್ರೋಹವಾದೀತು
ಎರಡೂ ನಿಜ ಒಂದು ಹೊರನಿಜ ಇನ್ನೊಂದು ಒಳನಿಜ
ಅಷ್ಟೇ ಹಾಗೆಂದು ನನ್ನ ದ್ವೈತಿಗಳ ಸಾಲಿಗೇ ಸೇರಿಸಬೇಡಿ
*****