ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದರೆ ಅದನ್ನು
ಮತ್ತೆ ಒಟ್ಟಿಗೆ ಸೇರಿಸಲಿಕ್ಕಾಗುವುದಿಲ್ಲ ಎಂದೆಲ್ಲ
ನೇನೇಕೆ ಹೇಳಲಿ? ಎಲ್ಲರಿಗೂ ಗೊತ್ತಿರುವ ತೀರ
ಸಾಮಾನ್ಯವಾದ ಸಂಗತಿಗಳನ್ನು ಬಿಟ್ಟುಬಿಡೋಣ. ಬರೇ
ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು ಹೇಗೆ
ಎಂಬುದನ್ನಷ್ಟೆ ನೋಡೋಣ. ಮೊದಲು
ಒಂದು ಸರಿಯಾಗಿ ಕಳೆತ ಕಲ್ಲಂಗಡಿ ಹಣ್ಣನ್ನು ತೊಳೆದು
ತಟ್ಟೆಯಲ್ಲಿ ಇರಿಸಬೇಕು, ಅಡ್ಡಕ್ಕೋ ಉದ್ದಕ್ಕೋ
ಹೇಗೇ ಇರಿಸಿದರೂ ಅದು ದುಂಡಗೇ ಕುಳಿತುಕೊಳ್ಳುತ್ತದೆ ಬಿಡಿ.
ಆಮೇಲೆ ಹರಿತವಾದ ಒಂದು ಚೂರಿಯಿಂದ
ಅದನ್ನು ಮೇಲಿಂದ ಕೆಳಕ್ಕೆ ಅಥವ ಕೆಳಗಿನಿಂದ
ಮೇಲಕ್ಕೆ ಅಥವ ಎಡದಿಂದ ಬಲಕ್ಕೆ ಅಥವ
ಬಲದಿಂದ ಎಡಕ್ಕೆ ಅಥವ-ನಿಜಕ್ಕೂ ಹೇಳುವುದಾದರೆ
ಒಂದು ಕಲ್ಲಂಗಡಿ ಹಣ್ಣನ್ನು ಕತ್ತಿರುಸುವುದಕ್ಕೆ ಅಸಂಖ್ಯ
ರೀತಿಗಳಿವೆ. ನನ್ನ ಅಫಘಾನೀಮಿತ್ರನೊಬ್ಬ
ಮಧ್ಯದಿಂದ ಅಡ್ಡಕ್ಕೆ ಕತ್ತರಿಸಿ ಒಳಗಿನ ತಿರುಳನ್ನು
ಚೂರಿಯಿಂದ ಹೆರೆದು ತೆಗೆಯುತ್ತಿದ್ದ. ಕೆಲವರು ನೀಟಾಗಿ ಕತ್ತರಿಸಿ
ಹೋಳುಗಳನ್ನು ಕಚ್ಚಿ ತಿನ್ನುತ್ತಾರೆ. ಕೆಲವರು ತಿನ್ನುವ ಮೊದಲು
ಬೀಜಗಳನ್ನು ತೆಗೆಯುತ್ತಾರೆ, ಇನ್ನು ಕೆಲವರು
ತಿನ್ನುವಾಗ ಉಗಿಯುತ್ತಾರೆ. ನಿಜಕ್ಕೂ ಹೇಳುವುದಾದರೆ
ಒಂದು ಕಲ್ಲಂಗಡಿ ಹಣ್ಣನ್ನು ತಿನ್ನುವುದಕ್ಕೆ ಅನೇಕ
ವಿಧಾನಗಳಿವೆ. ಎಲ್ಲಕ್ಕಿಂತ ಮುಖ್ಯವೆಂದರೆ-
ಅಥವಾ ನೇನೇಕೆ ಹೇಳಲಿ ಅದನ್ನು?
*****